ಆಮ್ ಆದ್ಮಿ ಪಾರ್ಟಿಯ ಆಪ್ ನಡೆ ಹಳ್ಳಿ ಕಡೆ ಮುಕ್ತಾಯ

app
Published on

ಮಡಿಕೇರಿ: ಕೊಡಗು ಆಮ್ ಆದ್ಮಿ ಪಾರ್ಟಿಯ ನಡೆ ಹಳ್ಳಿ ಕಡೆ ಕಾರ್ಯಕ್ರಮ ಜಿಲ್ಲೆಯಾದ್ಯಂತ ಯಶಸ್ವಿಯಾಗಿದೆ ಎಂದು ಆಪ್ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ.


ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಗ್ರಾಮೀಣ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಲ್ಲಿ ಸಮಾಲೋಚನೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ, ಕರಡಿಗೊಡು, ಆಸ್ಥಾನ, ಮಾಲ್ದಾರೆ, ಚೆನ್ನಂಗಿ, ಪಾಲಿಬೆಟ್ಟ, ಅಮ್ಮತ್ತಿ, ಚಂಬೆಬೆಳ್ಳೂರು, ಕೆದಮುಳ್ಳೂರು, ಆರ್ಜಿ, ಬೋಟೋಳಿ ಮತ್ತು ತೋರಾ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆಯಲಾಯಿತು ಎಂದು ತಿಳಿಸಿದ್ದಾರೆ.


ಚಂಬೆಬೆಳ್ಳೂರು ಗ್ರಾಮದ ಮಗ್ಗುಲ ಮತ್ತು ಪೂದಕೋಟೆ ಶಾಲೆಗಳು ಮುಚ್ಚುವ ಹಂತದಲ್ಲಿದೆ. ಬಿಟ್ಟಂಗಾಲದ ಅಂಬಟ್ಟಿ ಹಾಗೂ ಅರಮೇರಿಯಲ್ಲಿ ಇರುವ ಸರ್ಕಾರಿ ಶಾಲೆಗಳು ಈಗಾಗಲೇ ಮುಚ್ಚಿವೆ. ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಬಹಳ ದಿನಗಳಿಂದ ಕಸದ ರಾಶಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ದುರ್ವಾಸನೆ ಬೀರುತ್ತಿದೆ. ಸಿದ್ದಾಪುರದ ಕಸ ಮತ್ತು ತ್ಯಾಜ್ಯ ನೆಲ್ಲಿಹುದಿಕೇರಿ ಭಾಗದಲ್ಲಿ ಕಾವೇರಿ ನದಿ ಒಡಲಿಗೆ ಸೇರುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಗಮನ ಸೆಳೆದರು ಎಂದು ತಿಳಿಸಿದ್ದಾರೆ.


ಹಾಡಿಗಳಲ್ಲಿ ಕುಡಿಯುವ ನೀರಿನ ಪೂರೈಕೆ ಇಲ್ಲದೆ ಜನ ದೂರದ ಪ್ರದೇಶದಿಂದ ನೀರು ತರಬೇಕಾದ ಅನಿವಾರ್ಯತೆ ಎದುರಾಗಿದೆ. ಮಾಲ್ದಾರೆಯಲ್ಲಿರುವ ಪಶು ವೈದ್ಯಕೀಯ ಕೇಂದ್ರ ಕಾರ್ಯ ನಿರ್ವಹಿಸುತ್ತಿಲ್ಲ. ಸಿಬ್ಬಂದಿ ಇಲ್ಲದೆ ಕಟ್ಟಡ ಅನಾಥವಾಗಿದೆ. ಪಾಲಿಬೆಟ್ಟ ಸರ್ಕಾರಿ ಆರೋಗ್ಯ ಕೇಂದ್ರ ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದೆ. ಹೆಚ್ಚಿನ ರೋಗಿಗಳು ಆಗಮಿಸುತ್ತಿರುವುದರಿಂದ ಇರುವ ವೈದ್ಯರು ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳ್ಳದೆ ತ್ಯಾಜ್ಯ ನೇರವಾಗಿ ಕದನೂರು, ಬೇತ್ರಿಯಿಂದ ಕಾವೇರಿ ನದಿಗೆ ಸೇರುತ್ತಿದೆ. ಕಾವೇರಿ ನದಿ ನೀರು ಕಲುಷಿತಗೊಳ್ಳುತ್ತಿದೆ. ಪಟ್ಟಣದಲ್ಲಿ ವಾಹನ ಪಾಕಿರ್ಂಗ್ ವ್ಯವಸ್ಥೆ ಇಲ್ಲದೆ ನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಪಟ್ಟಣವನ್ನು ಕಸ ವಿಲೇವಾರಿ ಸಮಸ್ಯೆ ಕೂಡ ಕಾಡುತ್ತಿದೆ ಎಂದು ತಿಳಿಸಿದ್ದಾರೆ.


ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳ ಸಹಕಾರದಿಂದ ಕೊಡಗು ಆಪ್ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಯಶಸ್ವಿಯಾಗಿದೆ. ಕಳೆದ ಎರಡು ತಿಂಗಳಲ್ಲಿ ಸುಮಾರು ೫೦-೬೦ ಗ್ರಾಮಗಳಿಗೆ ಭೇಟಿ ನೀಡಿ ೪೦೦ಕ್ಕೂ ಅಧಿಕ ಜನರಿಂದ ಸಮಸ್ಯೆಗಳ ಮಾಹಿತಿ ಪಡೆಯಲಾಗಿದೆ. ಅಲ್ಲದೆ ಗ್ರಾಮಮಟ್ಟದಲ್ಲಿ ಪಕ್ಷ ಸಂಘಟನೆಗೆ ಅಡಿಪಾಯ ಹಾಕಲಾಗಿದೆ. ಮುಂಬರುವ ಚುನಾವಣೆಗಳಲ್ಲಿ ಜನಪರ ಕಾಳಿಜಿಯ ಆಮ್ ಆದ್ಮಿ ಪಾರ್ಟಿಗೆ ಜಿಲ್ಲೆಯ ಜನ ಅಭೂತಪೂರ್ವ ಬೆಂಬಲ ನೀಡಲಿದ್ದಾರೆ ಎಂದು ಭೋಜಣ್ಣ ಸೋಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net