15 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿ ಕೂಡಲೇ ಆರಂಭಿಸಿ ಆಮ್ ಆದ್ಮಿ ಪಕ್ಷ ಸರ್ಕಾರಕ್ಕೆ ಒತ್ತಾಯ.

aap protest
Published on

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವೆಲ್ಲಾರ ಜಂಕ್ಷನ್ ಹಾಗೂ ವೈಟ್ ಫೀಲ್ಡ್ ವರೆಗಿನ ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿ ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷ ಸರ್ಕಾರವನ್ನು ಒತ್ತಾಯಿಸಿದೆ.

ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ ಆಸ್ಪತ್ರೆ ವೃತ್ತದಲ್ಲಿ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಜಗದೀಶ್ ಬಾಬು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಹಲವು ವರ್ಷಗಳ ಹಿಂದೇಯೇ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ಆದರೆ, ಸರ್ಕಾರವು ಈ ರಸ್ತೆಯಲ್ಲಿ ದೇಶದ ಪ್ರಧಾನ ಮಂತ್ರಿಗಳು, ಮಂತ್ರಿಗಳು ಸೇರಿ ಅನೇಕ ಪ್ರತಿಷ್ಠಿತ ರಾಜಕಾರಣಿಗಳು ಓಡಾಡುತ್ತಾರೆ ಎಂಬ ಕಾರಣ ನೀಡಿ ಈ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಸರ್ಕಾರಕ್ಕೆ ಪ್ರಭಾವಿ ರಾಜಕಾರಣಿಗಳ ಹಿತಾಸಕ್ತಿಯೇ ಮುಖ್ಯವಾಗಿದೆಯೇ ಹೊರತು , ಪ್ರತಿನಿತ್ಯ ಸಂಚರಿಸುವ ಲಕ್ಷಾಂತರ ಪ್ರಯಾಣಿಕರ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿಯೇ ಇಲ್ಲದಂತಾಗಿದೆ ಎಂದು ಪಕ್ಷದ ಕಾರ್ಯದರ್ಶಿ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದರು.

ಎಚ್‌ಎಎಲ್,ಎನ್‌ಎಎಲ್ ಹಾಗೂ ಡಿ ಆರ್ ಡಿ ಓ ದಂತಹ ರಕ್ಷಣಾ ಸಂಸ್ಥೆಗಳ ಸ್ಥಾಪನೆಯಿಂದ ಬೆಂಗಳೂರಿಗೆ ಬ್ರಾಂಡ್ ತಂದಿರುವ ಹಿರಿಮೆ ಹಳೆ ವಿಮಾನ ನಿಲ್ದಾಣ ರಸ್ತೆಗಿದೆ. ಸದಾ ಬ್ರಾಂಡ್ ಬೆಂಗಳೂರು ಎಂದು ಮಾತನಾಡುವ ಉಪ ಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಈ ಕಡೆ ಗಮನಹರಿಸಿ ಕೂಡಲೇ ಈ ಭಾಗದ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು. ಪಕ್ಷದ ಮುಖಂಡರಾದ ಅನಿಲ್ ನಾಚಪ್ಪ,ಲೋಕೇಶ್ ಕುಮಾರ್, ಭಾನುಪ್ರಿಯ ಹಾಗೂ ಕಾರ್ಯಕರ್ತರು ಪ್ರತಿಭಟನೆಗೆ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net