

ಮೈಸೂರು: ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಲೋಕಸಭೆ ಚುನಾವಣೆಯನ್ನು ಎದುರಿಸಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಬಿಜೆಪಿ ಸರ್ಕಾರದ ಭ್ರಷ್ಟಾರದಿಂದ ಬೇಸತ್ತು ಹಾಗೂ ಕಾಂಗ್ರೆಸ್‌ನ ಭರವಸೆಗಳಿಂದ ಆಕರ್ಷಿತರಾಗಿ ಜನರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಕೆಲವು ಉಚಿತ ಯೋಜನೆಗಳನ್ನು ಜಾರಿಗೆ ತಂದ ಸಂದರ್ಭ ಕಾಂಗ್ರೆಸ್ ಟೀಕಿಸಿತ್ತು. ಆದರೆ, ಕಾಂಗ್ರೆಸ್ ರಾಜ್ಯದಲ್ಲಿ ಉಚಿತ ಯೋಜನೆ ಮುಂದಿಟ್ಟುಕೊಂಡು ಅಧಿಕಾರ ಪಡೆಯಿತು. ಹೀಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಕಾಂಗ್ರೆಸ್ ಧನ್ಯವಾದ ಹೇಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್ ಸರ್ಕಾರ ಉಚಿತ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಅದು ಜನತೆಗೆ ಸುಲಭವಾಗಿ ತಲುಪುತ್ತಿದೆಯೇ ಎಂಬ ಬಗ್ಗೆಯೂ ಗಮನ ಹರಿಸಬೇಕು. ಭ್ರಷ್ಟಾಚಾರ ತೊಲಗಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈ ನಿಟ್ಟಿನಲ್ಲಿ ಬದ್ಧತೆ ಪ್ರದರ್ಶಿಸಬೇಕಾಗಿದೆ. ಇದೀಗ ಶಾಸಕರುಗಳೇ ವರ್ಗಾವಣೆಗೆ ಕೈ ಹಾಕಿರುವುದು ಸರಿಯಲ್ಲ ಎಂದು ಹೇಳಿದರು.
ಮಣಿಪುರ ಗಲಬೆ ನಿಯಂತ್ರಿಸಲು ಕೇಂದ್ರ ಹಾಗೂ ಅಲ್ಲಿನ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎರಡೂ ಕಡೆ ಬಿಜೆಪಿ ಸರ್ಕಾ ರವಿದೆ. ಆದರೆ, ಗಲಬೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಖಂಡನೀಯ. ಗಲಬೆ ವಿಚಾರವಾಗಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿರುವುದು ಸರ್ಕಾರಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಮಾಲವಿಕ ಗುಬ್ಬಿವಾಣಿ, ಬಿ.ಟಿ. ನಾಗಪ್ಪ, ಕುಶಾಲಸ್ವಾಮಿ, ಸೋಸಲೆ ಸಿದ್ದರಾಜು ಹಾಗೂ ಇತರರು ಇದ್ದರು.