ಭ್ರೂಣ ಪತ್ತೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿ: ಎಎಪಿ ಜಿಲ್ಲಾಧ್ಯಕ್ಷ ಬೂದನೂರು ಬೊಮ್ಮಯ್ಯ ಆಗ್ರಹ

Aam Aadmi Party press conference mandya
Published on

ಮಂಡ್ಯ: ಭ್ರೂಣ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಂಡುಬಂದಿರುವುದರಿಂದ ಸಿಬಿಐನಿಂದ ತನಿಖೆ ಮಾಡಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ(ಎಎಪಿ) ಜಿಲ್ಲಾಧ್ಯಕ್ಷ ಬೂದನೂರು ಬೊಮ್ಮಯ್ಯ ಒತ್ತಾಯಿಸಿದರು.

ತಾಲೂಕಿನ ಹಾಡ್ಯ ಗ್ರಾಮದ ಆಲೆಮನೆಯೊಂದರಲ್ಲಿ ಭ್ರೂಣ ಪತ್ತೆ ಪ್ರಕರಣವನ್ನು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದಕ್ಕೂ ಮುನ್ನ ಶ್ರೀರಂಗಪಟ್ಟಣ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರು ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ನಡೆಸುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಭೆಯಲ್ಲಿ ಹಾಜರಿದ್ದ ಆರೋಗ್ಯಾಧಿಕಾರಿ ನಮಗೆ ಈ ಬಗ್ಗೆ ದೂರು ಬಂದಿದೆ. ಇನ್ನೂ ಪತ್ತೆ ಹಚ್ಚುವ ಕರ‌್ಯದಲ್ಲಿ ತೊಡಗಿದ್ದೇವೆಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇದನ್ನು ಅಂದೇ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದರೆ ಇಷ್ಟೊಂದು ದೊಡ್ಡ ಮಟ್ಟದವರೆಗೆ ಹೋಗುತ್ತಿರಲಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಂಡ್ಯ ಪೊಲೀಸರು ಮತ್ತು ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರೇ ಪ್ರಕರಣ ಬೇಧಿಸಬೇಕಾಗಿಯಿತು. ಹಳೇ ಮೈಸೂರು ಪ್ರದೇಶ ಸೇರಿದಂತೆ ಇದು ಎಲ್ಲೆಲ್ಲಿ ವ್ಯಾಪಿಸಿದೆ ಎಂಬುದನ್ನು ನಿಖರವಾಗಿ ಪತ್ತೆ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇದನ್ನು ಸಿಬಿಐ ತನಿಖೆಯಿಂದ ಮಾತ್ರವೇ ಸಾಧ್ಯ ಎಂದ ಅವರು, ವೈದ್ಯ ವೃತ್ತಿಯಲ್ಲಿ ಮಾನವೀಯತೆ, ಮನುಷ್ಯತ್ವ ಮರೆಯಾಗುತ್ತಿದೆ. ಇದರಿಂದ ಸಮಾಜದ ಮುಂದಿನ ಪೀಳಿಗೆಗೆ ಮಾರಕವಾಗಿ ಗಂಭೀರ ಸಮಸ್ಯೆಗಳನ್ನು ತಂದೊಡ್ಡುವ ಅಪಾಯವಿರುತ್ತದೆ. ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಎಎಪಿ ಮುಖಂಡರಾದ ಶಿವಕುಮಾರ್, ಸುರೇಶ್‌ಗೌಡ, ಯೋಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net