

ಮಡಿಕೇರಿ: ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯದ ೨೨೪ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಎ.ಎ.ಪಿ ರಾಜ್ಯ ಕಾರ್ಯಧ್ಯಕ್ಷ ಬಿ.ಟಿ.ನಾಗಣ್ಣ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡತನದಿಂದ ಹೊರಬರಲು ಪ್ರತಿಯೊಬ್ಬರಿಗೂ ಶಿಕ್ಷಣ ಬೇಕು. ಆದರೆ, ಇಂದು ಶಿಕ್ಷಣ ವ್ಯವಹಾರ ಆಗಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ವೈದ್ಯಕೀಯ ಸೀಟ್ ಪಡೆಯುವುದು ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಕಷ್ಟವಾಗಿದ್ದು, ನಗರ ಪ್ರದೇಶದವರಿಗೆ ಸುಲಭ ತುತ್ತಾಗಿದೆ. ಈ ರೀತಿಯ ತಾರತಮ್ಯ ಇರಬಾರದು. ಕಟ್ಟಕಡೆಯ ವ್ಯಕ್ತಿಗೆ ಗುಣಾತ್ಮಕ ಶಿಕ್ಷಣ ಸಿಗಬೇಕಾಗಿದೆ. ಶಿಕ್ಷಣ ಮತ್ತು ಆರೋಗ್ಯ ಒತ್ತು ನೀಡು ಸಲುವಾಗಿ ಪ್ರಸ್ತುತ ವರ್ಷದ ಎಂಎಲ್‌ಎ ಚುನಾವಣೆಯಲ್ಲಿ ೨೨೪ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ. ಈಗಾಗಲೇ ೧೯೬ ಕ್ಷೇತ್ರಗಳಿಗೆ ೩೯೦ ಆಕಾಂಕ್ಷಿಗಳಿದ್ದಾರೆ. ಉಳಿದ ಕ್ಷೇತ್ರವನ್ನು ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಚನ್ನಪ್ಪಗೌಡ, ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ, ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೆಗೌಡ, ಜಿಲ್ಲಾ ಕಾರ್ಯದರ್ಶಿ ಪೃಥ್ವಿ, ಆಕಾಂಕ್ಷಿ ವೆಂಕಟೇಶ ಉಪಸ್ಥಿತರಿದ್ದರು.