

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನಡೆಸಿದ ನೀಟ್-2024ರಲ್ಲಿ ಆಕಾಶ್ನ 21ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದು ಅಮೋಘ ಸಾಧನೆ ಮಾಡಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ನಂಬರ್ 1ರ್ಯಾಂಕ್ ಹಂಚಿಕೊಂಡಿದ್ದಾರೆ ಎಂದು ಆಕಾಶ್ ಎಜ್ಯುಕೇಶನಲ್ ಸರ್ವಿಸಸ್ ಲಿಮಿಟೆಡ್ನ ಕರ್ನಾಟಕ ಮುಖ್ಯಸ್ಥ ಕೆ. ರಾಜೇಶಕುಮಾರ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಒಬ್ಬ ವಿದ್ಯಾರ್ಥಿ 716, ಇಬ್ಬರು 715 ಅಂಕಗಳು ಸೇರಿ 30 ವಿದ್ಯಾರ್ಥಿಗಳು 700ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ಆಕಾಶ್ ಹುಬ್ಬಳ್ಳಿ ಶಾಖೆಯ ವಿದ್ಯಾರ್ಥಿ ಹೃಷಿಕೇಶ್ ಹೊನವಾಡ ಹಾಗೂ ಸರೀಮ್ ಜೈದ್ ಎ. ತಲಾ 700 ಅಂಕ ಪಡೆದುಕೊಂಡಿದ್ದಾರೆ. ಇಲ್ಲಿಯ 24 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ ಎಂದರು.
ಈ ಹಿಂದಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಲು 540 ಅಂಕಗಳು ಕಟ್ ಆಪ್ ಆಗಿದ್ದವು. ಈ ಬಾರಿ ದೇಶದಲ್ಲಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದಿರುವುದಲ್ಲದೇ ಸಾವಿರಾರು ವಿದ್ಯಾರ್ಥಿಗಳು 700ಕ್ಕೂ ಅಧಿಕ ಗಳಿಸಿದ್ದಾರೆ. ಹಾಗಾಗಿ ಈ ಬಾರಿ ಕರ್ನಾಟಕದಲ್ಲಿ 600 ಕ್ಕೂ ಮೇಲ್ಪಟ್ಟು ಅಂಕ ಪಡೆದವರು ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಲು ಸಾಧ್ಯವಾಗಬಹುದು ಎಂದು ಹೇಳಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಏರಿಯಾ ಸೇಲ್ಸ್ ಹೆಡ್ ಗಿರೀಶ ದುರ್ಗದಮಠ, ಹುಬ್ಬಳ್ಳಿ ಶಾಖೆ ವ್ಯವಸ್ಥಾಪಕ ಮಹಾಂತೇಶ ಕರವೀರಮಠ, ಶೈಕ್ಷಣಿಕ ಮುಖ್ಯಸ್ಥ ಅಜಿತ ಸಿ. ಇದ್ದರು.