

ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆದ ರಾಜ್ಯದ ವಿವಿಧ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ ಆಯಿಮಾತಾಜೀ ಪ್ರತಿಭಾ ಪುರಸ್ಕಾರ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಪುಣ್ಯದ ಕೆಲಸ ಎಂದು ನಿವೃತ್ತ ಪ್ರಾಂಶುಪಾಲ ಶಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಆಲನಹಳ್ಳಿಯ ಶಾಶ್ವತ ಸೇವಾ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಆಯಿಮಾತಾಜೀ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡುವ ಮೂಲಕ ತಂದೆ, ತಾಯಿ ಹಾಗೂ ನಾಡಿನ ಸೇವೆ ಮಾಡಬೇಕು ಎಂದು ಕರೆ ನೀಡಿದರು
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಮಾತನಾಡಿ, ಶಿಕ್ಷಣದ ಜತೆ ಕಲೆ ಸಾಹಿತ್ಯ ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಿ ಗುಣಾತ್ಮಕ ಶಿಕ್ಷಣ ಪಡೆದು ವಿದ್ಯಾರ್ಥಿಗಳು ಜೀವನದಲ್ಲಿ ಭದ್ರ ಬುನಾದಿ ಹಾಕಿಕೊಳ್ಳಬೇಕು ಎಂದರು
‘ಗುಂಡಾಪುರ ಜ್ಞಾನಲೋಕ’ ಸಂಚಿಕೆಯನ್ನು ಕವಿ ಗೋವಿಂದಸ್ವಾಮಿ ಬಿಡುಗಡೆ ಮಾಡಿದರು. ಪ್ರತಿಭಾವಂತ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳಾದ ಜಿ.ಕೆ. ಚಿನ್ಮಯ್, ಚಿನ್ಮಯಿ ಶ್ರೀಪಾದ್ ಹೆಗಡೆ, ದರ್ಶನ್ ಸುಬ್ರಾಯ್ ಭಟ್, ಡಿ.ಎಂ. ಹರ್ಷಿತಾ, ಕೆ.ಎಂ.ಶ್ರೀರಾಮ್, ಡಿ.ಎಸ್.ಧನ್ವಿ, ಎಸ್. ಜಾಹ್ನವಿ, ಶಾಶ್ವತ ಶಾಲೆ ವಿದ್ಯಾರ್ಥಿಗಳಾದ ರಕ್ಷಿತಾ, ನಂದಿನಿ, ಸೋನು ಸೀರ್ವಿ, ತನುಗುಪ್ತ ಅವರಿಗೆ ಆಯಿಮಾತಾಜೀ ನಗದು ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಾಲೆಯ ಕನ್ನಡ ಶಿಕ್ಷಕ ರಮೇಶ್ ತಾಯೂರು, ದೈಹಿಕ ಶಿಕ್ಷಕ ಪ್ರದೀಪ್ ಕುಮಾರ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಎಂ.ಆರ್, ಚೌಧರಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಬಿಆರ್‌ಸಿ ಡಿ.ಎನ್. ಗೀತಾ, ಮುಖ್ಯಶಿಕ್ಷಕಿ ಎಚ್.ಪಿ. ಪವಿತ್ರಾ, ಸಹಮುಖ್ಯ ಶಿಕ್ಷಕ ರಮೇಶ್ ಹಾಗೂ ಇತರರು ಇದ್ದರು.