

ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳನ್ನು ಖಚಿತ ಪಡಿಸಿಕೊಳ್ಳಲು ಹಾಗೂ ಮಕ್ಕಳ ಹಾಜರಾತಿಯಲ್ಲಿ ಅಕ್ರಮ ತಡೆಗಟ್ಟಲು ‘ಆಧಾರ ಬೇಸ್ ಆನ್‌ಲೈನ್ ಹಾಜರಾತಿ’ ವ್ಯವಸ್ಥೆ ಜಾರಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ.
ರಾಜ್ಯಾದ್ಯಂತ ಗ್ರಾಮೀಣ, ನಗರ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಈ ಎಲ್ಲ ಮಕ್ಕಳು ವರ್ಷಕ್ಕೊಮ್ಮೆ ಪರೀಕ್ಷೆ ಬರೆಯಲು ಮಾತ್ರ ಶಾಲೆಗೆ ಬರುತ್ತಾರೆ. ಮತ್ತೊಂದೆಡೆ ಗೈರಾದ ಮಕ್ಕಳ ಹಾಜರಾತಿ ಹೆಸರಿನಲ್ಲಿ ಮಧ್ಯಾಹ್ನ ಬಿಸಿಯೂಟ, ಪಠ್ಯಪುಸ್ತಕ ಸೇರಿ ವಿವಿಧ ಸೌಲಭ್ಯ ಪಡೆದುಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಶಿಕ್ಷಣ ಇಲಾಖೆ ಮುಂದಾಗಿದೆ.
ಮಕ್ಕಳ ಸಂಖ್ಯೆಗೂ, ಹಾಜರಾತಿಗೂ ವ್ಯತ್ಯಾಸ: ರಾಜ್ಯದಲ್ಲಿ 20,320 ಕಿರಿಯ, 21,245 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅಂದಾಜು 45 ರಿಂದ 50 ಲಕ್ಷ ಮಕ್ಕಳು ಕಲಿಯುತ್ತಿದ್ದಾರೆ. ಅಲ್ಲದೇ, ಪ್ರತಿವರ್ಷ ಮಕ್ಕಳ ಹಾಜರಾತಿ ಪ್ರಮಾಣ ಶೇ.12ರಷ್ಟು ಹೆಚ್ಚಳವಾಗುತ್ತಿದೆ. ಆದರೆ, ವಾಸ್ತವದಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆಗೂ ಮತ್ತು ಹಾಜರಾತಿಗೂ ಬಹಳ ವ್ಯತ್ಯಾಸ ಕಂಡು ಬರುತ್ತಿದೆ. ಇದು ಮಧ್ಯಾಹ್ನ ಬಿಸಿಯೂಟ ಯೋಜನೆಯ ಮೇಲೆ ಪರಿಣಾಮ ಉಂಟು ಮಾಡುತ್ತಿದೆ.
ಸರ್ಕಾರಿ ಶಾಲೆಗೆ ಪ್ರವೇಶ, ಖಾಸಗಿ ಶಾಲೆಯಲ್ಲಿ ವ್ಯಾಸಾಂಗ: ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಪ್ರಮಾಣ ಅಂದಾಜು ಶೇ.38ರಷ್ಟು ಹೆಚ್ಚಳವಾಗಿದೆ. ಆದರೆ, ಕೆಲ ಪಾಲಕರು ತಮ್ಮ ಮಕ್ಕಳಿಗೆ ಗ್ರಾಮೀಣ ಪ್ರದೇಶ ಕಲಿಕಾ ಪ್ರಮಾಣ ಪತ್ರ ಸೇರಿ ವಿವಿಧ ದಾಖಲಾತಿಗಳಿಗಾಗಿ ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದು ಖಾಸಗಿ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಇಂತಹ ವ್ಯವಸ್ಥೆಗೆ ಸಂಪೂರ್ಣ ಕಡಿವಾಣ ಹಾಕಲು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆಧಾರ್ ಬೇಸ್ ಹಾಜರಾತಿ ತೆಗೆದುಕೊಳ್ಳುವ ವ್ಯವಸ್ಥೆ ಜಾರಿಗೊಳಿಸಲು ಕ್ರಮ ವಹಿಸಲಾಗಿದೆ.
ಪ್ರಸಕ್ತ ವರ್ಷವೇ ಜಾರಿ: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದು ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳು ಓದಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಕೆಲ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಗ್ರಾಪಂ ಸದಸ್ಯರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇದು ಸರ್ಕಾರಿ ಶಾಲೆಗಳ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ಪಾರದರ್ಶಕ ವ್ಯವಸ್ಥೆಯನ್ನು 2025-26ನೇ ಶೈಕ್ಷಣಿಕ ಶಾಲೆಯಿಂದಲೇ ಜಾರಿಗೆ ತರಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಚಿಂಗ್ ಹಾಜರ್, ಶಾಲೆಗೆ ಚಕ್ಕರ್: ಮೂರಾರ್ಜಿ ವಸತಿ ಶಾಲೆ, ನವೋದಯ ಸೇರಿ ವಿವಿಧ ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶ ಪಡೆದುಕೊಳ್ಳಲು ಪಾಲಕರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದುಕೊಂಡು ದುಬಾರಿ ಶುಲ್ಕ ಕಟ್ಟಿ ಕೋಚಿಂಗ್ ಕ್ಲಾಸ್‌ಗಳಿಗೆ ಸೇರಿಸುತ್ತಿದ್ದಾರೆ. ವಾರ್ಷಿಕ ಪರೀಕ್ಷೆಗಳಿಗೆ ಮಾತ್ರ ಮಕ್ಕಳನ್ನು ಕರೆ ತರುತ್ತಿದ್ದಾರೆ. ಇದು ಇತರ ಮಕ್ಕಳ ಕಲಿಕೆ ಮೇಲೆ ಕೆಟ್ಟ ಬೀರುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದು ಖಾಸಗಿ ಶಾಲೆಗಳಲ್ಲಿ ಓದಿಸುತ್ತಿರುವ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಆಧಾರ್ ಬೇಸ್ ಆನ್‌ಲೈನ್ ಹಾಜರಾತಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ.- ರಾಹುಲ್ ಶಿಂಧೆ, ಜಿಪಂ ಸಿಇಒ ಬೆಳಗಾವಿ