ಆಧಾರ ಸೇವಾ ಕೇಂದ್ರ ಬಂದ್

KMT Adhar
Published on

ಕುಮಟಾ: ಇಲ್ಲಿನ ತಾಲೂಕು ಸೌಧದಲ್ಲಿನ ಆಧಾರ ಸೇವಾ ಕೇಂದ್ರವು ಕಳೆದೊಂದು ತಿಂಗಳಿಂದ ಬಂದ್ ಆಗಿದೆ. ಸಾರ್ವಜನಿಕರು ಆಧಾರ ಸಂಬಂಧಿ ಕೆಲಸ ಕಾರ್ಯಗಳಿಗೆ ಪರದಾಡುವ ಪರಿಸ್ಥಿತಿ ನಿರ್ವಣವಾಗಿದೆ.

ತಾಂತ್ರಿಕ ತೊಂದರೆಯಿಂದ ಆಧಾರ ಸ್ಥಗಿತ ಎಂದು ಸೇವಾ ಕೇಂದ್ರದೆದುರು ಸೂಚನೆ ಅಂಟಿಸಲಾಗಿದೆ. ಅಸಲಿಗೆ ತಾಂತ್ರಿಕ ತೊಂದರೆ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಏಕೆಂದರೆ ತಾಂತ್ರಿಕ ತೊಂದರೆಯಿದ್ದಲ್ಲಿ ಹೆಚ್ಚೆಂದರೆ ವಾರದೊಳಗೆ ಸರಿಪಡಿಸಬಹುದಿತ್ತು. ಆದರೆ ಇಲ್ಲಿ ಯಾರೂ ಇರುವುದಿಲ್ಲ. ಇಲ್ಲಿನ ಸಿಬ್ಬಂದಿ ಕೆಲಸಕ್ಕೆ ಬರುತ್ತಾರೆ, ಆದರೆ, ಮೇಲಂತಸ್ತಿನಲ್ಲಿರುವ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಬಗ್ಗೆ ತಹಸೀಲ್ದಾರ್ ಕಚೇರಿಯಲ್ಲಿ ವಿಚಾರಿಸಿದಾಗ, ಆಧಾರ ಸೇವಾ ವಿಭಾಗದವರೇ ಸಿಬ್ಬಂದಿಯನ್ನು ಕೈಬಿಟ್ಟಿದ್ದು ಬೇರೆ ಸಿಬ್ಬಂದಿ ನಿಯೋಜನೆ ಆಗಿಲ್ಲ. ಈವರೆಗೆ ಕೆಲಸ ಮಾಡಿದ ಸಿಬ್ಬಂದಿಯನ್ನು ಕೈಬಿಟ್ಟಿರುವುದಕ್ಕೆ ಕಾರಣವೂ ಸ್ಪಷ್ಟವಾಗದೇ ಸಮಸ್ಯೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಏನೇ ಇದ್ದರೂ ನಿತ್ಯ 50ಕ್ಕೂ ಹೆಚ್ಚು ಜನರ ಆಧಾರ ಸಂಬಂಧಿ ಕೆಲಸ ಕಾರ್ಯಗಳು ಇಲ್ಲಿ ನಡೆಯುತ್ತಿತ್ತು. ತಾಲೂಕು ಮಾತ್ರವಲ್ಲದೆ ಹೊನ್ನಾವರ ಹೋಬಳಿಯಿಂದಲೂ ಸಾರ್ವಜನಿಕರು ಇಲ್ಲಿಗೆ ಬರುತ್ತಿದ್ದರು. ಅತಿವೃಷ್ಟಿಯ ನಡುವೆ ತಾಲೂಕಾಡಳಿತವೂ ಈವಿಚಾರವನ್ನು ಹಗುರವಾಗಿ ಪರಿಗಣಿಸಿದೆ. ಇದರೊಟ್ಟಿಗೆ ಆಧಾರ ಸೇವಾ ವ್ಯವಸ್ಥೆ ನಿರ್ವಹಿಸುವ ವಿಭಾಗದ ನಿಲಕ್ಷ್ಯದಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net