ಮತಪಟ್ಟಿಗೂ ಆಧಾರ್ ನೋಂದಣಿ: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ

27TMK_DC_Voter_LIST_Aadhar 2
Published on

ತುಮಕೂರು: ಹಾಲಿ ಮತಪಟ್ಟಿಯಲ್ಲಿ ನೋಂದಣಿ ಮಾಡಿಕೊಂಡಿರುವ ಮತದಾರರು ಸ್ವಯಂ ಪ್ರೇರಿತರಾಗಿ ತಮ್ಮ ಹೆಸರು, ವಿಳಾಸ ಇತ್ಯಾದಿಗಳನ್ನು ದೃಢೀಕರಿಸಲು ಆಧಾರ್ ಸಂಖ್ಯೆ ನೋಂದಣಿ ಮಾಡಿಕೊಳ್ಳಲು ಭಾರತ ಚುನಾವಣಾ ಆಯೋಗ ಸೂಚಿಸಿದೆ.


ಆಧಾರ್ ಸಂಖ್ಯೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ನಮೂನೆ-6ಬಿ ರಲ್ಲಿ ಆಧಾರ ಸಂಖ್ಯೆಯನ್ನು ಭರ್ತಿ ಮಾಡಿ ದೃಢೀಕರಿಸಲು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಜಿಲ್ಲೆಯ ಮತದಾರರಿಗೆ ಮನವಿ ಮಾಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮತದಾರರ ವಿವರಗಳಿಗೆ ಆಧಾರ್ ನಂಬರ್ ಸಂಗ್ರಹಣೆ, ಜೋಡಣೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಚರ್ಚಿಸಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಆಧಾರ್ ಸಂಖ್ಯೆ ದೃಢೀಕರಣ ಕಾರ್ಯ 2022 ಆ.1ರಿಂದ ಮಾರ್ಚ್ 31, 2023ರ ವರೆಗೆ ನಡೆಯಲಿದೆ, ಜಿಲ್ಲೆಯ ಎಲ್ಲ ನೋಂದಾಯಿತ ಮತದಾರರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡುಆಧಾರ್ ನಂಬರ್‌ಗಳನ್ನು ನಮೂದಿಸಿ, ದೃಢೀಕರಿಸಿಕೊಳ್ಳಬಹುದು ಎಂದರು.


ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಆ್ಯಪ್‌ನಲ್ಲಿ ಆನ್‌ಲೈನ್ ಮೂಲಕ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳಲ್ಲಿ ಮತದಾದರರು ಸ್ವತಃ ತಾವೇ ಖುದ್ದು, ನಮೂನೆ-6ಬಿ ಯನ್ನು ಭರ್ತಿ ಮಾಡಿ ಸಲ್ಲಿಸಬಹುದು ಎಂದರು. ಜಿಲ್ಲೆಯಲ್ಲಿ 1115812 ಪುರುಷರು ಹಾಗೂ 1113805 ಮಹಿಳೆಯರು, 110 ಇತರೆ ಸೇರಿದಂತೆ ಒಟ್ಟು 2229727 ಮತದಾರರಿದ್ದಾರೆ. ಒಟ್ಟು ಜಿಲ್ಲೆಯ ಲಿಂಗಾನುಪಾತ ಸರಾಸರಿ 999 ಇದೆ ಎಂದರು. ಮತದಾರ ಪಟ್ಟಿಗೆ ಹೆಸರು ಸೇರ್ಪಡಿಕೆ ಅವಧಿಯನ್ನು ವರ್ಷದಲ್ಲಿ 4 ಭಾರಿ ನಿಗದಿಪಡಿಸಲಾಗಿದ್ದು, 18 ವರ್ಷ ತುಂಬಿದ ಯುವಕ, ಯುವತಿಯರು ಜನವರಿ 01, ಏಪ್ರಿಲ್ 01, ಜುಲೈ 01 ಮತ್ತು ಅಕ್ಟೋಬರ್ 01 ರಂದು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬಹುದು ಎಂದರು.

ದಾಖಲೆಗಳನ್ನು ಸಲ್ಲಿಸಿ: ಆಫ್‌ಲೈನ್ ಮೂಲಕ ದೃಢೀಕರಣ ನೀಡಲಿಚ್ಛಿಸುವ ಮತದಾರರು ನಮೂನೆ-6ಬಿಯನ್ನು ಭರ್ತಿಮಾಡಿ ಆಧಾರ್ ಕಾರ್ಡ್, ಮತ್ತು ಇತರ ದಾಖಲಾತಿಗಳ ಪ್ರತಿಯೊಂದಿಗೆ ಸಂಬಂಧಿಸಿದ ಬಿಎಲ್‌ಒಗಳಿಗೆ ಸಲ್ಲಿಸಬಹುದು. ಇತರ ದಾಖಲಾತಿಗಳಾದ ನರೇಗಾ ಉದ್ಯೋಗ ಕಾರ್ಡ್, ಬ್ಯಾಂಕ್, ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್‌ಪುಸ್ತಕ, ಕಾರ್ಮಿಕ ಮಂತ್ರಾಲಯದ ಯೋಜನೆಯ ಅಡಿಯಲ್ಲಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್‌ಕಾರ್ಡ್, ಎನ್‌ಪಿಆರ್ ಅಡಿಯಲ್ಲಿ ಆರ್‌ಜಿಐ ಮೂಲಕ ನೀಡಲಾದ ಸ್ಮಾರ್ಟ್ ಕಾರ್ಡ್, ಇಂಡಿಯನ್ ಪಾಸ್‌ಪೋಟ್, ಭಾವಚಿತ್ರರವಿರುವ ಪಿಂಚಣಿ ದಾಖಲೆ, ಕೇಂದ್ರ, ರಾಜ್ಯ ಸರ್ಕಾರ ಸಾರ್ವಜನಿಕ ವಲಯದ ಉದ್ದಿಮೆಗಳು, ಸಾರ್ವಜನಿಕ ನಿಯಮಿತ ಕಂಪನಿಗಳಿಂದ ಉದ್ಯೋಗಿಗಳಿಗೆ ನೀಡಲಾದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಂಸತ್ ಸದಸ್ಯರು, ವಿಧಾನ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರುಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಮೂಲಕ ನೀಡಲಾದ ವಿಶಿಷ್ಟ ಗುರುತಿನ ಚೀಟಿ ದಾಖಲೆಗಳ ಪ್ರತಿಗಳೊಂದಿಗೆ ಬಿಎಲ್‌ಒಗಳಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net