ಆಧಾರ್, ಪಾನ್ ಲಿಂಕ್ : ದಂಡ ವಸೂಲಿ ತಕ್ಷಣ ನಿಲ್ಲಿಸಲಿ

HOTTEYANDA PARVATHI
Published on

ಮಡಿಕೇರಿ: ಪಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ ಬಡವರಿಗೆ ಹೊರೆಯಾಗಿರುವ ದುಬಾರಿ ದಂಡ ವಸೂಲಾತಿಯನ್ನು ತಕ್ಷಣ ನಿಲ್ಲಿಸಬೇಕೆಂದು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಹೊಟ್ಟೆಯಂಡ ಫ್ಯಾನ್ಸಿ ಬೆಳ್ಯಪ್ಪ ಒತ್ತಾಯಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಾನ್, ಆಧಾರ್ ಲಿಂಕ್ ಕುರಿತು ವ್ಯಾಪಕ ಪ್ರಚಾರ ನೀಡದ ಸರ್ಕಾರ ಇದೀಗ ಬಡವರು, ಕೂಲಿ ಕಾರ್ಮಿಕರು, ಆಟೋಚಾಲಕರು, ಅನಕ್ಷರಸ್ಥರು, ಜನಸಾಮಾನ್ಯರಿಗೆ ಹೊರೆಯಾಗಬಲ್ಲ ರೂ.೧ ಸಾವಿರ ದಂಡ ವಿಧಿಸುತ್ತಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಪಾನ್, ಆಧಾರ್ ಲಿಂಕ್ ನೆಪದಲ್ಲಿ ಹಣ ಸಂಗ್ರಹಿಸಲಾಗುತ್ತಿದೆ. ಬಡವರು ದಂಡ ಪಾವತಿಗಾಗಿಯೇ ಸಾಲ ಮಾಡುವ ಪರಿಸ್ಥಿತಿ ಎದುರಾಗಿದೆ. ಒಂದು ಬಡ ಕುಟುಂಬದಲ್ಲಿ ೫ ರಿಂದ ೧೦ ಮಂದಿ ಇರುತ್ತಾರೆ. ಒಬ್ಬರು ಅಥವಾ ಇಬ್ಬರು ಮಾತ್ರ ದುಡಿಯುತ್ತಿರುತ್ತಾರೆ. ಇವರೆಲ್ಲರೂ ತಲಾ ಒಂದು ಸಾವಿರ ದಂಡ ಪಾವತಿಸಬೇಕೆಂದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.


ಇದೀಗ ಸರ್ಕಾರ ಪಾನ್, ಆಧಾರ್ ಲಿಂಕ್ ನ ದಿನಾಂಕವನ್ನು ಜೂ.೩೦ ರವರೆಗೆ ವಿಸ್ತರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಈ ಅವಧಿಯಲ್ಲಿ ಯಾವುದೇ ಕಾರಣಕ್ಕೂ ದಂಡ ವಸೂಲಿ ಮಾಡಬಾರದು. ಜು.೧ ರ ನಂತರ ದಂಡ ವಿಧಿಸುವುದಾಗಿ ಘೋಷಣೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net