ನ್ಯಾಯಬೆಲೆ ಅಂಗಡಿಯಲ್ಲಿ ಆಧಾರ್ ಸಂಖ್ಯೆ ಜೋಡಣೆ

17mdka3
ಮಡಿಕೇರಿ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಮಡಿಕೇರಿ ತಾಲೂಕು ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿಗಳು ಹಾಗೂ ಮಾಲೀಕರ ಜೊತೆ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವ ಸಂಬಂಧ ನಡೆದ ಸಭೆ ಅಧ್ಯಕ್ಷತೆ ವಹಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಮಾತನಾಡಿದರು. ಪಿ.ಎಸ್. ಮಹೇಶ್, ಯು.ಪಿ. ವೀಣಾ ಮತ್ತಿತರರು ಇದ್ದರು.
Published on

ಮಡಿಕೇರಿ: ಮತದಾರರು ಚುನಾವಣಾ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ನ್ಯಾಯಬೆಲೆ ಅಂಗಡಿಗೆ ನೀಡಿದರೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಹೇಳಿದರು.


ಮಡಿಕೇರಿ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಮಡಿಕೇರಿ ತಾಲೂಕು ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿಗಳು ಹಾಗೂ ಮಾಲೀಕರ ಜೊತೆ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.


ಪಡಿತರ ಚೀಟಿಯಲ್ಲಿ ಅರ್ಹ ಫಲಾನುಭವಿಗಳು ಇಕೆವೈಸಿ ಮಾಡಿಸಿಕೊಳ್ಳಲು ಬಿಟ್ಟು ಹೋಗಿದ್ದಲ್ಲಿ ಇಕೆವೈಸಿ ಮಾಡಿಸಿಕೊಳ್ಳಲು ಅವಕಾಶವಿದೆ. ಆ ನಿಟ್ಟಿನಲ್ಲಿ ಫಲಾನುಭಗಳು ಕಡ್ಡಾಯವಾಗಿ ಇಕೆವೈಸಿ ಮಾಡಿಸಿಕೊಳ್ಳುವಂತೆ ತಿಳಿಸಿದರು.ಪ್ರಸ್ತುತ ಸರ್ಕಾರದ ಆದೇಶದಂತೆ ಇ-ಕೆವೈಸಿ (ಜೀವ ಮಾಪಕ ಮರು ದೃಢೀಕರಣ) ಕಾರ್ಯ ಮತ್ತೆ ಪ್ರಾರಂಭಿಸಲಾಗಿದೆ. ಈ ಹಿಂದೆ ಇ-ಕೈವೈಸಿ ಮಾಡಿಸಿರದ ಅಂತ್ಯೋದಯ ಅನ್ನಯೋಜನೆ, ಆದ್ಯತಾ ಪಡಿತರ ಚೀಟಿ ಮತ್ತು ಆದ್ಯತೇತರ ಪಡಿತರ ಚೀಟಿಗಳಲ್ಲಿ ಸೇರ್ಪಡೆಗೊಂಡಿರುವ ಸದಸ್ಯರು ಕೂಡಲೇ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ತಮ್ಮ ಬೆರಳಚ್ಚನ್ನು ನೀಡಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.


ಪಡಿತರ ಚೀಟಿಯಲ್ಲಿ ಈಗಾಗಲೇ ಆಧಾರ್ ಕಾರ್ಡ್ ಜೋಡಣೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ. ಆ ನಿಟ್ಟಿನಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಿಸಲು ಸರ್ಕಾರದ ಆದೇಶವಿದೆ. ವೋಟರ್ ಹೆಲ್ಫ್‌ಲೈನ್ ಆ್ಯಪ್ ಮೂಲಕ ಸ್ಮಾರ್ಟ್ ಫೋನ್ ಬಳಕೆದಾರರು ತಮ್ಮ ಮತ್ತು ಕುಟುಂಬದವರ ಮತದಾರರ ಗುರುತಿನ ಚೀಟಿಯ ಸಂಖ್ಯೆಗೆ ಆಧಾರ್ ಜೋಡಣೆ ಮಾಡಬಹುದು. ಇದರೊಂದಿಗೆ ಮತ್ತೊಬ್ಬ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಿಸಬಹುದೆಂದರು.


ಸ್ಮಾರ್ಟ್ ಫೋನ್ ಹೊಂದಿರದ ಹಾಗೂ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಿಸಲು ತಿಳಿಯದೇ ಇರುವವರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಪ್ರತಿ ನೀಡಿದರೆ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಿಕೊಡಲಾಗುವುದು ಎಂದರು.


ಪಡಿತರ ಅಂಗಡಿಯ ಮಾಲೀಕರು ಮತದಾರರಿಂದ ಪಡೆದ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಪ್ರತಿ ಕ್ರೋಡೀಕರಿಸಿ ಸಂಬಂಧಪಟ್ಟ ಗ್ರಾಮಲೆಕ್ಕಿಗರು ಅಥವಾ ಬಿಎಲ್‌ಒಗಳಿಗೆ ನೀಡಿದರೆ ಅವರು ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡುತ್ತಾರೆ ಎಂದರು.


ಮತದಾರರ ಗುರುತಿನ ಚೀಟಿ ಹೊಂದಿರುವವರು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಬಂದು ತಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಣೆ ಮಾಡಿಸಲು ಕಷ್ಟವಾಗಬಹುದು. ಆ ನಿಟ್ಟಿನಲ್ಲಿ ಮತದಾರರಿಗೆ ಸಹಾಯವಾಗಲು ಗ್ರಾಮ ಮಟ್ಟದಲ್ಲಿಯೇ ದಾಖಲೆ ಪಡೆದು ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವ ಕೆಲಸ ಮಾಡಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net