

ನರೇಗಲ್ಲ: ಪಟ್ಟಣದ ಉಪ ತಹಸೀಲ್ದಾರ್ ಕಚೇರಿಯಲ್ಲಿರುವ ಆಧಾರ್ ನೋಂದಣಿ ಕೇಂದ್ರ ಬಂದ್ ಮಾಡಲಾಗಿದ್ದು, ಸಾರ್ವಜನಿಕರು ನೋಂದಣಿ ಹಾಗೂ ತಿದ್ದುಪಡಿಗಾಗಿ ಪರದಾಡುವಂತಾಗಿದೆ.
ಈ ಮೊದಲು ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ನೀಡಲಾಗುತ್ತಿತ್ತು, ಆದರೆ, ಅದು ಬಂದ್ ಆಗಿ ವರ್ಷಗಳೇ ಕಳೆದಿವೆ. ಈಗಿರುವ ಏಕೈಕ ಕೇಂದ್ರವು ಬಂದ್ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗಾಗಿ ಬಂದಿದ್ದ ಸಾರ್ವಜನಿಕರು ಆಧಾರ್ ಕೇಂದ್ರ ಬಂದ್ ಮಾಡಲಾಗಿದೆ ಎಂದು ತಿಳಿದು ನಿರಾಸೆಯಿಂದ ಮರಳಿದರು.
ಈ ಕೇಂದ್ರಕ್ಕೆ ಕೋಡಿಕೊಪ್ಪ. ಕೋಚಲಾಪುರ, ತೋಟಗಂಟಿ, ಮಲ್ಲಾಪುರ, ದ್ಯಾಂಪುರ, ಬೂದಿಹಾಳ, ಜಕ್ಕಲಿ, ಮಾರನಬಸರಿ, ನಿಡಗುಂದಿ, ನಿಡಗುಂದಿಕೊಪ್ಪ, ಅಬ್ಬಿಗೇರಿ, ಹಾಲಕೆರೆ, ಕುರಡಗಿ, ಗುಜಮಾಗಡಿ, ಯರೇಬೇಲೇರಿ, ಡ.ಸ. ಹಡಗಲಿ, ಹೊಸಳ್ಳಿ, ಕಳಕಾಪುರ ಸೇರಿ ಸುತ್ತಲಿನ ಗ್ರಾಮಗಳ ಜನ ಬರುತ್ತಾರೆ. ಈ ಊರಿನ ಜನರಿಗೆ ಇದೊಂದೇ ಕೇಂದ್ರ ಆಸರೆಯಾಗಿದೆ. ತಾಂತ್ರಿಕ ಕಾರಣದಿಂದ ಕೇಂದ್ರ ಬಂದ್ ಮಾಡಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಮಯ ಮತ್ತು ಹಣ ಖರ್ಚು ಮಾಡಿ ಅಲೆದಾಡಬೇಕಾಗಿದೆ.
ಅಡುಗೆ ಅನಿಲದ ಸಂಪರ್ಕ, ಬ್ಯಾಂಕ್ ಖಾತೆ ಸೇರಿ ಅನೇಕ ಸರ್ಕಾರಿ ಕೆಲಸಗಳಿಗೆ ಆಧಾರ್ ಕಡ್ಡಾಯವಾಗಿದೆ. ಆಧಾರ್ ಇಲ್ಲದೆ ಹೋದರೆ ಯಾವುದೇ ಕೆಲಸಗಳು ಆಗದ ಸ್ಥಿತಿ ಇದೆ. ಆಧಾರ್ ನೋಂದಣಿ ಹಾಗೂ ತಿದ್ದುಪಡಿಗಾಗಿ ಇದ್ದ ಒಂದೇ ಕೇಂದ್ರವೂ ಈಗ ಬಂದ್ ಆಗಿದ್ದರಿಂದ ಜನರು ರೋಣ, ಗಜೇಂದ್ರಗಡ ಹಾಗೂ ಗದಗ ನಗರಗಳಿಗೆ ಹೋಗುತ್ತಿದ್ದಾರೆ. ಇದರಿಂದ ಸಮಯ, ಹಣ ಪೋಲಾಗುತ್ತಿದೆ.
ನರೇಗಲ್ಲ ಪಟ್ಟಣ ಅನೇಕ ಶಿಕ್ಷಣ ಸಂಸ್ಥೆಗಳಿಂದಾಗಿ ವಿದ್ಯಾಕಾಶಿ ಎನಿಸಿಕೊಂಡಿದೆ. ಆದರೆ, ಸೌಕರ್ಯಗಳ ವಿಷಯದಲ್ಲಿ ನಿರೀಕ್ಷಿತ ಅಭಿವೃದ್ಧಿ ಸಾಕಾರವಾಗಿಲ್ಲ. ಇರುವ ನಾಲ್ಕಾರು ಸರ್ಕಾರಿ ಕಚೇರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಎಲ್ಲ ಕೆಲಸ ಕಾರ್ಯಗಳಿಗೂ ಆಧಾರ್ ಕಡ್ಡಾಯವಾಗಿದ್ದು, ಆಧಾರ್ ಕೇಂದ್ರವನ್ನು ಏಕಾಏಕಿ ಬಂದ್ ಮಾಡಿರುವುದು ಎಷ್ಟು ಸರಿ? ಎಂದು ಜನತೆ ಪ್ರಶ್ನಿಸುತ್ತಿದ್ದಾರೆ. ‘ಆಧಾರ್ ನೋಂದಣಿ ಹಾಗೂ ತಿದ್ದುಪಡಿಗಾಗಿ ಸಾರ್ವಜನಿಕರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಆಧಾರ್ ನೋಂದಣಿ ಕೇಂದ್ರ ಆರಂಭಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟ ಕೈಗೊಳ್ಳಲಾಗುವುದು’ ಎಂದು ರೈತ ಸೇನಾ ಅಧ್ಯಕ್ಷ ಶರಣಪ್ಪ ಧರ್ಮಾಯತ ಎಚ್ಚರಿಸಿದ್ದಾರೆ.
ಜಿಲ್ಲೆಯ ನರೇಗಲ್ಲ, ಡಂಬಳ, ಹಾಗೂ ಕೊಣ್ಣೂರು ಆಧಾರ್ ಕೇಂದ್ರಗಳನ್ನು ಎರಡು ದಿನಗಳ ಹಿಂದೆ ಬಂದ್ ಮಾಡಲಾಗಿದೆ. ಆಧಾರ್ ಕೇಂದ್ರವನ್ನು ಗುತ್ತಿಗೆ ಪಡೆದ ಏಜೆನ್ಸಿ ಈ ಕ್ರಮ ಕೈಗೊಂಡಿದೆ. ಅದಕ್ಕೆ ಏನು ಕಾರಣವೆಂಬುದು ತಿಳಿದಿಲ್ಲ. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ಆಧಾರ್ ಕೇಂದ್ರವನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಸಕ್ರಪ್ಪ ದೊಡ್ಡಮನಿ ಉಪ ತಹಸೀಲ್ದಾರ್, ನರೇಗಲ್ಲ