

ಕೆಜಿಎಫ್ : ಭೂಅಕ್ರಮಗಳಿಗೆ ಪೂರ್ಣ ಕಡಿವಾಣ ಹಾಕುವ ಉದ್ದೇಶದಿಂದ ಕಂದಾಯ ಇಲಾಖೆ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಅಭಿಯಾನ ಹಮ್ಮಿಕೊಂಡಿದ್ದು, ರೈತರು ಸದ್ಬಳಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಹೇಳಿದರು.
ತಾಲೂಕು ಆಡಳಿತ ಸೌಧಕ್ಕೆ ಬುಧವಾರ ಭೇಟಿ ನೀಡಿ, ಆಧಾರ್ ಜೋಡಣೆ ಕಾರ್ಯಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದರು. ಜನಸ್ನೇಹಿಗಾಗಿ ತಂತ್ರಜ್ಞಾನ ಬಳಕೆ ಮಾಡುತ್ತಿದ್ದು, ಪಹಣಿಗೆ ಆಧಾರ ಜೋಡಣೆಯಿಂದ ಒಬ್ಬರ ಜಮೀನನ್ನು ಮತ್ತೊಬ್ಬರು ತಮ್ಮ ಹೆಸರಿಗೆ ಅಕ್ರಮವಾಗಿ ನೋಂದಣಿ ಮಾಡಿಕೊಳ್ಳುವುದು ಸೇರಿ ಇನ್ನಿತರ ಅಕ್ರಮಗಳನ್ನು ತಡೆಗಟ್ಟಬಹುದಾಗಿದೆ ಎಂದರು.
ಈ ಹಿಂದೆ ಆಸ್ತಿ ನೋಂದಣಿ ಅವಧಿ ಕಡಿತಗೊಳಿಸಿ, ಸಾರ್ವಜನಿಕರಿಗೆ ಶೀಘ್ರವಾಗಿ ಸೇವೆ ನೀಡುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಕಾವೇರಿ- ತಂತ್ರಾಂಶ ಜಾರಿಗೆ ತರಲಾಗಿತ್ತು. ಇದೀಗ ಕಂದಾಯ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿಸುವ ಸಲುವಾಗಿ ಆರ್ಟಿಸಿಗೆ ಆಧಾರ್ ಜೋಡಣೆ ಹಾಗೂ ಎನಿವೇರ್ ನೋಂದಣಿ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ ಎಂದು ಡಿಸಿ ತಿಳಿಸಿದರು.
ಶತಮಾನದ ಬೇಕರಿಗೆ ಭೇಟಿ
ನಗರದ ಉರಿಗಾಂನಲ್ಲಿನ 140 ವರ್ಷಗಳ ಹಳೇದಾದ ಗೋಲ್ಡ್ ಫೀಲ್ಡ್ ಬೇಕರಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಭೇಟಿ ನೀಡಿ, ಮೂರು ತಲೆಮಾರುಗಳಿಂದ ಬೇಕರಿ ಮುನ್ನಡಿಸಿಕೊಂಡು ಬರುತ್ತಿರುವುದಲ್ಲದೇ ಬ್ರೀಟಿಷರ ಕಾಲದ ಓವೆನ್ನಲ್ಲಿ ತಯಾರಿಸುವ ಮೂಲಕ ವಿಶೇಷವಾದ ತಿನಿಸುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಿನ್ನದ ಗಣಿಗಳನ್ನು ಮುಚ್ಚಿ 24 ವರ್ಷಗಳು ಕಳೆದರೂ ಇಂದಿಗೂ ಬೇಕರಿಯು ತಿಂಡಿತಿನಿಸುಗಳ ಗುಣಮಟ್ಟ ಕಾಪಾಡಿಕೊಂಡು ಬರುತ್ತಿದ್ದು, ಗೋಲ್ಡ್ಪೀಲ್ಡ್ ಬೇಕರಿಗೆ ಗ್ರಾಹಕರು ಈಗಲೂ ಮುಗಿ ಬೀಳುತ್ತಾರೆ. ಅದರಲ್ಲೂ ಇಲ್ಲಿನ ದಿಲ್ಪಸಂದ್ ಸವಿದರೆ ಮತೊಮ್ಮೆ ತಿನ್ನಬೇಕೆನ್ನಿಸುತ್ತದೆ. 140 ವರ್ಷಗಳ ಇತಿಹಾಸ ಹೊಂದಿರುವ ಗೋಲ್ಡ್ ಫೀಲ್ಡ್ ಬೇಕರಿಯಲ್ಲಿ ತಯಾರಿಸಲು ತಿಂಡಿಗಳ ಹೆಸರನ್ನು ಪ್ರವಾಸೋದ್ಯಮ ಇಲಾಖೆಯ ವಿಶೇಷ ತಿನಿಸುಗಳ ಪಟ್ಟಿಗೆ ಸೇರಿಸಲು ನಿರ್ದೇಶಕರಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.