

ನರೇಗಲ್ಲ: ತಾಂತ್ರಿಕ ಕಾರಣದಿಂದ ಸ್ಥಗೀತಗೊಂಡಿದ್ದ ಪಟ್ಟಣದ ಉಪ ತಹಸೀಲ್ದಾರ್ ಕಚೇರಿಯಲ್ಲಿನ ಆಧಾರ್ ನೋಂದಣಿ ಕೇಂದ್ರ ಬುಧವಾರ ಪುನಃ ಆರಂಭವಾಗಿದೆ.
ಈ ಮೊದಲು ಅಂಚೆ ಕಚೇರಿಯಲ್ಲಿ ಆಧಾರ್ ಸೇವೆಯನ್ನು ನೀಡಲಾಗುತ್ತಿತ್ತು, ಆದರೆ, ಅದು ಬಂದ್ ಆಗಿ ವರ್ಷಗಳೇ ಕಳೆದಿದ್ದವು, 7 ತಿಂಗಳ ಹಿಂದೆ ಉಪ ತಹಸೀಲ್ದಾರ್ ಕಚೇರಿಯಲ್ಲಿರುವ ಏಕೈಕ ಕೇಂದ್ರವು ಸ್ಥಗಿತಗೊಂಡ ಕಾರಣ ಸಾರ್ವಜನಿಕರು ಸಾಕಷ್ಟು ಹಣ ಮತ್ತು ಸಮಯ ವ್ಯಯ ಮಾಡಿಕೊಂಡು ರೋಣ, ಗಜೇಂದ್ರಗಡ, ಗದಗ ನಗರಗಳಿಗೆ ಅಲೇದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ‘ವಿಜಯವಾಣಿ’ಯಲ್ಲಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಆಧಾರ್ ಕೇಂದ್ರವನ್ನು ಪ್ರಾರಂಭಿಸಿದ್ದಾರೆ.
ಪಟ್ಟಣದ ಉಪ ತಹಸೀಲ್ದಾರ ಕಚೇರಿಯಲ್ಲಿರುವ ಆಧಾರ್ ನೋಂದಣಿ ಕೇಂದ್ರಕ್ಕೆ ಕೋಡಿಕೊಪ್ಪ. ಕೋಚಲಾಪೂರ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ, ಬೂದಿಹಾಳ, ಜಕ್ಕಲಿ, ಮಾರನಬಸರಿ, ನಿಡಗುಂದಿ, ನಿಡಗುಂದಿಕೊಪ್ಪ, ಅಬ್ಬಿಗೇರಿ, ಹಾಲಕೆರೆ, ಕುರಡಗಿ, ಗುಜಮಾಗಡಿ, ಯರೇಬೇಲೇರಿ, ಡ.ಸ. ಹಡಗಲಿ, ಹೊಸಳ್ಳಿ, ಕಳಕಾಪೂರ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಇದೊಂದೇ ಆಧಾರವಾಗಿದೆ.
ಆಧಾರ್ ಕೇಂದ್ರ ಮತ್ತೆ ಕಾರ್ಯಾರಂಭ ಮಾಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪ ತಹಸೀಲ್ದಾರ್ ಸಕ್ರಪ್ಪ ದೊಡ್ಡಮನಿ ತಿಳಿಸಿದ್ದಾರೆ.