ಪ್ರತಿ 10 ವರ್ಷಕೊಮ್ಮೆ ತಪ್ಪದೇ ಆಧಾರ್ ನವೀಕರಿಸಿ: ಎಡಿಸಿ ಡಾ.ಎಚ್.ಎಲ್.ನಾಗರಾಜು ಹೇಳಿಕೆ

Aadhaar Card Update Meeting Mandya
Published on

ಮಂಡ್ಯ: ಸರ್ಕಾರಿ ಸೌಲಭ್ಯ, ಸಹಾಯಧನ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡುವುದು ಸರ್ವೆ ಸಾಮಾನ್ಯ. ಆದ್ದರಿಂದ ಸಾರ್ವಜನಿಕರು ತಪ್ಪದೇ ಪ್ರತಿ ಹತ್ತು ವರ್ಷಕ್ಕೊಮ್ಮೆಯಾದರೂ ಆಧಾರ್ ಕಾರ್ಡ್‌ನ್ನು ಅಪ್‌ಡೇಟ್ ಮಾಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಆಧಾರ್ ಅಪ್‌ಡೇಟ್ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಧಾರ್ ಅಪ್‌ಡೇಟ್ ಮಾಡಿಸಿಕೊಳ್ಳದಿದ್ದಲ್ಲಿ ಸರ್ಕಾರ ಆರ್‌ಟಿಜಿಎಸ್ ಮೂಲಕ ನೀಡುವ ಸಹಾಯಧನ, ಪಿಂಚಣಿಗಳು ಖಾತೆಗೆ ಪಾವತಿಯಾಗದೇ ಇಲಾಖೆಗಳ ಬಳಿಯೇ ಉಳಿದು ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ತಪ್ಪದೇ ಸಾರ್ವಜನಿಕರು ಗಮನಹರಿಸಬೇಕು ಎಂದರು.

ಜಿಲ್ಲೆಯಲ್ಲಿ 19,83,248 ಜನರು ಆಧಾರ್ ಕಾರ್ಡ್ ಹೊಂದಿದ್ದಾರೆ. ಇದರಲ್ಲಿ 0-5 ವರ್ಷದೊಳಗಿನವರು 68,783, 5 ರಿಂದ 18 ವರ್ಷದೊಳಗಿನವರು 3,10,032 ಹಾಗೂ 16,04,433 18 ವರ್ಷ ಮೇಲ್ಪಟ್ಟವರಾಗಿದ್ದಾರೆ. ಆಧಾರ್ ಕಾರ್ಡ್‌ನಲ್ಲಿ ಮುಖ್ಯವಾಗಿ ಬಯೋಮೆಟ್ರಿಕ್ ನವೀಕರಣ ಮಾಡಿಕೊಳ್ಳಬೇಕು. ಅದರಂತೆ ಜಿಲ್ಲೆಯಲ್ಲಿ 5 ವರ್ಷ ಮೇಲ್ಪಟ್ಟ 84,637 ಹಾಗೂ 15 ವರ್ಷ ಮೇಲ್ಪಟ್ಟ 56,029 ಒಟ್ಟು 1,40,666 ಜನರ ಬಯೋಮೆಟ್ರಿಕ್ ಅಪ್‌ಡೇಟ್ ಬಾಕಿ ಇದೆ ಎಂದು ವಿವರಿಸಿದರು.

ಆಧಾರ್ ಕಾರ್ಡ್‌ಗೆ 18,51,821 ಜನರು ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿದ್ದಾರೆ. ಇನ್ನೂ 1,31,427 ಜನರ ಬಾಕಿ ಉಳಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.14ರೊಳಗಾಗಿ ಅಪ್‌ಡೇಟ್ ಮಾಡಿಸಿ. ಆದ್ದರಿಂದ ಜಿಲ್ಲೆಯ 5,13,941 ಜನರು ಕೂಡಲೇ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ 141 ಆಧಾರ್ ಕೇಂದ್ರಗಳಿದ್ದು, 50 ರೂ ಪಾವತಿಸಿ ನವೀಕರಣ ಮಾಡಿಕೊಳ್ಳಬೇಕು. ಒಂದು ವೇಳೆ ಅಕ್ರಮ ಆಧಾರ್ ನೋಂದಣಿ ಕಂಡುಬಂದಲ್ಲಿ ಜಿಲ್ಲಾ ಸಮಿತಿ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್‌ಕುಮಾರ್, ಇನ್ಸ್‌ಪೆಕ್ಟರ್ ಎಚ್.ಜಿ.ಮಂಜೇಗೌಡ, ಆಧಾರ್ ಕಾರ್ಡ್ ಕೋಆರ್ಡಿನೇಟರ್ ವೇಣುಗೋಪಾಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net