ಪಡಿತರ ಚೀಟಿದಾರರ ಎದೆಯಲ್ಲಿ ಢವಢವ!

TDL-28-1
Published on

ಪ್ರವೀಣ ಬುದ್ನಿ
ತೇರದಾಳ:
ಆಧಾರ್ ಕಾರ್ಡ್ ಅಪ್‌ಡೇಟ್ ಮತ್ತು ಹೊಸ ಕಾರ್ಡ್ ಮಾಡಿಸಲು ಸಾರ್ವಜನಿಕರು ಪರದಾಡುತ್ತಿರುವ ಸಂದರ್ಭದಲ್ಲೇ ರಾಜ್ಯ ಸರ್ಕಾರ ಪಡಿತರ ಚೀಟಿಗೆ ಆಧಾರ್ ಜೋಡಣೆ ಕಡ್ಡಾಯ ಮಾಡಿ ಎರಡು ತಿಂಗಳು ಗಡುವು ನೀಡಿರುವುದು ಪಡಿತರದಾರರ ಆತಂಕಕ್ಕೆ ಕಾರಣವಾಗಿದೆ.

ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯಿಲ್ಲದವರು, ಮಕ್ಕಳ ಹೆಸರು ಸೇರ್ಪಡೆ, ನೂತನ ಕಾರ್ಡ್ ಮಾಡಿಸಲು ಆಧಾರ್ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ. ಮೊದಲೇ ಆಧಾರ್ ಕೇಂದ್ರಗಳಲ್ಲಿ ನಿಧಾನಗತಿಯ ಅಪ್‌ಡೇಟ್ ಕಾರ್ಯದಿಂದ ಬಸವಳಿದಿರುವ ಜನತೆ, ಪ್ರತಿನಿತ್ಯ ಸರದಿ ನಿಂತು ನಿಂತೂ ಹೈರಾಣಾಗುತ್ತಿದ್ದಾರೆ. ಸರ್ಕಾರ ಈಗ ಪಡಿತರ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಲು ಗಡುವು ನೀಡಿ ಆದೇಶ ಹೊರಡಿಸಿರುವುದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಆಧಾರ್ ಕೇಂದ್ರಗಳ ಸಮಸ್ಯೆ
ತೇರದಾಳ ಮತಕ್ಷೇತ್ರದ ತೇರದಾಳ ವಿಶೇಷ ತಹಸೀಲ್ದಾರ್ ಕಚೇರಿಯನ್ನು ಹೊರತುಪಡಿಸಿ ಆಧಾರ್ ಸೇವಾ ಕೇಂದ್ರಗಳು ಎಲ್ಲೂ ಇಲ್ಲ. ರಬಕವಿ-ಬನಹಟ್ಟಿಯ ತಹಸೀಲ್ದಾರ್ ಕಚೇರಿಯಲ್ಲಿರುವ ಆಧಾರ್ ಕೇಂದ್ರದ ಬಾಗಿಲು ಮುಚ್ಚಿ ಹಲವು ತಿಂಗಳು ಗತಿಸಿವೆ. ಅಂಚೆ ಕಚೇರಿಗಳೆಡೆಗೆ ಜನರು ಮುಖ ಮಾಡಿದರೆ ರಬಕವಿ ಬನಹಟ್ಟಿಯಲ್ಲಿ ಮೂರ‌್ನಾಲ್ಕು ತಿಂಗಳು ಸರದಿಗಾಗಿ ಕಾಯಬೇಕಿದೆ. ಇನ್ನು ಮಹಾಲಿಂಗಪುರ, ತೇರದಾಳ ಅಂಚೆಯಲ್ಲಿಯೂ ಕೂಡ ಸರ್ವರ್ ಮತ್ತು ಸಿಬ್ಬಂದಿ ಸಮಸ್ಯೆಯಿಂದಾಗಿ ಸೇವೆ ಅಷ್ಟಕಷ್ಟೆ ಎನ್ನುತ್ತಾರೆ ಸಾರ್ವಜನಿಕರು.

ಕೆವೈಸಿ ಎದೆಬಡಿತ
ಪಡಿತರದಾರ ಕುಟುಂಬದವರು ಕಾರ್ಡ್‌ನೊಂದಿಗೆ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಸರದಿಯಲ್ಲಿ ನಿಂತು ಥಂಬ್ ಒತ್ತಿ ಆಧಾರ್ ಜೋಡಣೆ ಮಾಡಿಸಬೇಕು. ಅಲ್ಲಿ ಸರ್ವರ್ ಸಮಸ್ಯೆಯಿರುವುದರಿಂದ ಸಾರ್ವಜನಿಕರು ಕಾದು ಕಾದು ಸುಸ್ತಾಗುತ್ತಿದ್ದಾರೆ.

ಅಖಂಡ ಜಮಖಂಡಿ ತಾಲೂಕಿನಲ್ಲಿ 1.23 ಲಕ್ಷ ಪಡಿತರದಾರರ ಪೈಕಿ ಕೇವಲ ಶೇ.44 ಕೆವೈಸಿ ಮುಗಿದಿದ್ದು, ಇನ್ನು ಶೇ.56 ರಷ್ಟು ಬಾಕಿ ಇದೆ. ಇದರ ಬೆನ್ನಲ್ಲೇ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಪಡಿತರ ಕಾರ್ಡ್‌ಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸುವ ಪ್ರಕ್ರಿಯೆಗೆ ಎರಡು ತಿಂಗಳು ಗಡುವು ನೀಡಿದ ಹಿನ್ನೆಲೆ ಪಡಿತರದಾರರ ಎದೆ ಢವಢವ ಎಂದು ಬಡಿದುಕೊಳ್ಳುತ್ತಿದೆ.

ಶ್ರೀಮಂತರ ಕಾರ್ಡ್ ಅಂದರ್
ಬಿಪಿಎಲ್, ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿರುವ ಶ್ರೀಮಂತರು ಸರ್ಕಾರದ ಕಟ್ಟು ನಿಟ್ಟಿನ ಆದೇಶದನ್ವಯ ಕಾರ್ಡ್ ರದ್ದು ಮಾಡಿಸುತ್ತಿದ್ದಾರೆ. ತಾಲೂಕಿನಲ್ಲಿ ಈಗಾಗಲೇ ಐನೂರಕ್ಕೂ ಅಧಿಕ ಕಾರ್ಡ್‌ಗಳು ರದ್ದಾಗಿವೆ. ಅಲ್ಲದೆ, ಒಂದೇ ಕುಟುಂಬದ ಎರಡೆರಡು ಕಾರ್ಡ್ ಹೊಂದಿದವರ ಪ್ರಕರಣಗಳು ಕೆವೈಸಿಯಿಂದಾಗಿ ಬಂದ್ ಆಗಿವೆ.

ಒಟ್ಟಿನಲ್ಲಿ ಬಡವರಿಗಾಗಿ ಕೊಡುತ್ತಿರುವ ಅನ್ನಭಾಗ್ಯ ಯೋಜನೆ ಆಧಾರ್ ಹೆಸರಿನಲ್ಲಿ ಬಡವರ ಪಾಲಿಗೆ ತನ್ನೀರು ಬಟ್ಟೆಯಾಗಬಾರದೆಂಬುದು ಪ್ರಜ್ಞಾವಂತರ ಒತ್ತಾಸೆಯಾಗಿದೆ.

ಅಖಂಡ ಜಮಖಂಡಿ ತಾಲೂಕಿನಲ್ಲಿ ಕೆವೈಸಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈಗಾಗಲೇ ಶೇ.44ರಷ್ಟು ಅಪ್‌ಡೇಟ್ ಆಗಿದೆ. ನೂತನ ತಾಲೂಕುಗಳಲ್ಲಿಯೂ ಕಾರ್ಯ ನಡೆದಿದೆ.
ಡಿ.ಬಿ. ದೇಶಪಾಂಡೆ, ಆಹಾರ ತಾಲೂಕಾಧಿಕಾರಿ, ಜಮಖಂಡಿ

ಆಧಾರ್ ಅಪ್‌ಡೇಟ್ ಸಮಸ್ಯೆ ಬಹಳ ತಿಂಗಳಿಂದ ಇದೆ. ಆಧಾರ್ ಕೇಂದ್ರಗಳಲ್ಲಿ ಬಹಳಷ್ಟು ಸರದಿ ಇರುವುದರಿಂದ ಸಮಸ್ಯೆಯಾಗಿದೆ. ಆಧಾರ್ ಅಪ್‌ಡೇಟ್‌ಗೆ ಪರ್ಯಾಯ ವ್ಯವಸ್ಥೆ ಆಗಬೇಕಿದೆ.
ಕಲ್ಲಪ್ಪ ಭಜಂತ್ರಿ, ತೇರದಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net