ಆಡಳಿತವನ್ನು ಗ್ರಾಮೀಣ ಮಟ್ಟಕ್ಕೆ ಒಯ್ದ ಹೆಗ್ಗಳಿಕೆಗೆ ಪಾತ್ರರಾದ ಜಿಲ್ಲಾಧಿಕಾರಿ ಅರ್ಚನಾ: ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

11-cpt-7p
Published on

ಚನ್ನಪಟ್ಟಣ: ಕಂದಾಯ ಸಚಿವರ ಸೂಚನೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಹಳ್ಳಿಗಳತ್ತ ತೆರಳಿರುವ ಜಿಲ್ಲಾಡಳಿತ, ತಾಲೂಕಿನ ಗಡಿಗ್ರಾಮದ ಜನರ ಸಮಸ್ಯೆ ಆಲಿಸಿದೆ. ಬುಧವಾರ ತಾಲೂಕಿನ ಇಗ್ಗಲೂರಿನಲ್ಲಿ ಜನಸಂಪರ್ಕ ಸಭೆ ಆರಂಭಿಸುವ ಮೂಲಕ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಜಿಲ್ಲಾಡಳಿತವನ್ನು ಗ್ರಾಮಕ್ಕೆ ಕೊಂಡೊಯ್ದ ಡಿಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಅಧಿಕಾರಿಗಳು ಹಳ್ಳಿಗಳತ್ತ ಸಾಗುತ್ತಿಲ್ಲ ಎಂದು ತರಾಟೆ ತೆಗೆದುಕೊಂಡಿದ್ದರು.

ಜಿಲ್ಲಾಡಳಿತದ ಜನತಾ ದರ್ಶನ ಕಾರ್ಯಕ್ರಮದ ಮಾಹಿತಿ ತಿಳಿದ ಸಾರ್ವಜನಿಕರು, ಆಧಾರ್ ತಿದ್ದುಪಡಿ, ಪಿಂಚಣಿಗೆ ಸಂಬಂಧಿಸಿದ ಸಮಸ್ಯೆ, ರಸ್ತೆ ಒತ್ತುವರಿ, ಅಕ್ರಮ ಕಾರ್ಖಾನೆ, ಶಾಲೆ ಜಾಗ ಒತ್ತುವರಿ ಸೇರಿ ಹಲವು ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಸೆಳೆದರು. ಸಾರ್ವಜನಿಕರ ವೈಯಕ್ತಿಕ ಹಾಗೂ ಗ್ರಾಮದ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿದರು. ಇನ್ನು ಕೆಲ ಸಮಸ್ಯೆಗಳನ್ನು ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

80ಕ್ಕೂ ಹೆಚ್ಚು ಅರ್ಜಿ: ಜನಸಂಪರ್ಕ ಸಭೆಗೆ ಸಂಬಂಧಿಸಿದಂತೆ ಸಾರ್ವಜನಿಕರು 36 ಅರ್ಜಿಗಳನ್ನು ಈ ಹಿಂದೆಯೇ ಗ್ರಾಪಂ ಕಚೇರಿಯಲ್ಲಿ ಸಲ್ಲಿಸಿದ್ದರು. ಬುಧವಾರ ನಡೆದ ಸಭೆಯಲ್ಲಿ 40ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು.

ಅಚ್ಚುಕಟ್ಟಾದ ವ್ಯವಸ್ಥೆ: ಜನಸಂಪರ್ಕ ಸಭೆಗೆ ತಾಲೂಕು ಆಡಳಿತದಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೇದಿಕೆ ನಿರ್ಮಿಸಲಾಗಿತ್ತು. ಸಭೆಗೆ ಆಗಮಿಸಿದ ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಾಸಾಶನ ಪತ್ರ ವಿತರಣೆ: ಸಾರ್ವಜನಿಕರಿಗೆ ಸರ್ಕಾರದಿಂದ ತಲುಪಬೇಕಾದ ಯೋಜನೆಗಳನ್ನು ನೀಡುವುದು ಅಧಿಕಾರಿಗಳಾದ ನಮ್ಮ ಕರ್ತವ್ಯ. ಸಭೆಯಲ್ಲಿ ನೀಡಿರುವ ಮನವಿಗಳಲ್ಲಿ ಕೆಲವನ್ನು ಪರಿಹರಿಸಲಾಗಿದೆ. ಉಳಿದ ಅರ್ಜಿಗಳನ್ನು ಸಂಬಂಧಪಟ್ಟವರಿಗೆ ಕಳುಹಿಸಿ ಗಮನಹರಿಸುವಂತೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕೆಲ ಫಲಾನುಭವಿಗಳಿಗೆ ಮಾಸಾಶನ ಪತ್ರ ವಿತರಿಸಲಾಯಿತು. ಆಧಾರ್ ತಿದ್ದುಪಡಿ ಮತ್ತು ನೋಂದಣಿ ಕೇಂದ್ರ ತೆರೆಯಲಾಗಿತ್ತು ಹಾಗೂ ಹೊಸದಾಗಿ ಪಿಂಚಣಿಗೆ ಅರ್ಜಿ ಸಲ್ಲಿಸುವವರಿಗೆ ಅವಕಾಶ ಮಾಡಿಕೊಡಲಾಗಿತ್ತು. ಜನಸಂಪರ್ಕ ಸಭೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಗ್ರಾಮದ ಸರ್ಕಾರಿ ಶಾಲೆ ಕೈತೋಟ ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು. ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಅಧಿಕಾರಿಗಳ ಮೇಲೆ ಹೆಜ್ಜೇನು ದಾಳಿ: ಜನಸಂಪರ್ಕ ಮುಗಿಸಿ ಇಗ್ಗಲೂರಿನ ದೇವೇಗೌಡ ಬ್ಯಾರೇಜ್ ವೀಕ್ಷಿಸಲು ತೆರಳಿದ ಅಧಿಕಾರಿಗಳು ಹೆಜ್ಜೇನು ದಾಳಿಗೆ ತುತ್ತಾದರು. ಬ್ಯಾರೇಜ್ ವೀಕ್ಷಿಸಲು ತೆರಳಿದ ಅಧಿಕಾರಿಗಳ ಮೇಲೆ ಏಕಾಏಕಿ ದಾಳಿ ಮಾಡಿದವು. ಜಿಪಂ ಸಿಇಒ ಇಕ್ರಂ, ಜಿಪಂ ಉಪಕಾರ್ಯದರ್ಶಿ ಹಾಗೂ ಚನ್ನಪಟ್ಟಣ ತಾಪಂ ಇಒ ಚಂದ್ರ ಸೇರಿ 7 ಮಂದಿ ಮೇಲೆ ದಾಳಿ ನಡೆಸಿವೆ. ಜಿಲ್ಲಾಧಿಕಾರಿ ಸೇರಿ ಇತರ ಅಧಿಕಾರಿಗಳು ಪಾರಾಗಿದ್ದಾರೆ. ದಾಳಿಗೆ ತುತ್ತಾದವರಿಗೆ ಇಗ್ಗಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಯಿತು.

ಕರೋನಾ ಭಯ ಇಲ್ಲ: ಜಿಲ್ಲೆಗೆ ಕರೊನಾ ವೈರಸ್‌ನ ಭಯ ಇಲ್ಲ. ಸಾರ್ವಜನಿಕರು ಮಾಸ್ಕ್ ಧರಿಸುವ ಅಗತ್ಯವೂ ಇಲ್ಲ. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೂ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಯಾರು ಕೂಡ ಆತಂಕ ಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net