

ತುಮಕೂರು : ಬಜರಂಗದಳ ಕಾರ್ಯಕರ್ತರು ಗೋವಿನ ರಕ್ಷಣೆಗೆ ಎಷ್ಟೇ ಎಚ್ಚರಿಕೆ ವಹಿಸಿದ್ದರೂ ಜಿಲ್ಲೆಯಲ್ಲಿ ಅಕ್ರಮ ಗೋವು ಸಾಗಣೆ ನಿರಂತರವಾಗಿ ಸಾಗಿದೆ. ನೆರೆ ರಾಜ್ಯಗಳಿಗೆ ಪೊಲೀಸ್ ರಕ್ಷಣೆಯಲ್ಲೇ ಜಾನುವಾರುಗಳ ಸಾಗಣೆ ನಡೆದಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.
ಅಕ್ರಮ ಗೋವು ಸಾಗಣೆ ದಂಧೆಯ ಕಿಂಗ್‌ಪಿನ್, ಮಾಗಡಿ ಮೂಲದ ಉಸ್ಮಾನ್ ಘನಿ ಜಾನುವಾರುಗಳ ಕಳ್ಳ ಸಾಗಣೆಯ ರೂವಾರಿ ಎನಿಸಿದ್ದಾನೆ. ಈತ ತುಮಕೂರು ತಾಲೂಕು ಹೆಬ್ಬೂರು ಠಾಣಾ ವ್ಯಾಪ್ತಿಯಲ್ಲಿ ಸಾಗುತ್ತಿರುವ ದಂಧೆಯ ಪಾಲುದಾರನಾಗಿದ್ದು, ಈತನಿಗೆ ಸ್ಥಳೀಯರ ಬೆಂಬಲವಿದೆ. ಈ ಅಕ್ರಮಕ್ಕೆ ಪೊಲೀಸರ ಕುಮ್ಮಕ್ಕಿರುವುದು ರಹಸ್ಯವಾಗೇನೂ ಉಳಿದಿಲ್ಲ.
ವಾರಕ್ಕೆ 3 ಕಂಟೈನರ್: ನಾಗವಲ್ಲಿ ಲಾಯದಿಂದ ಕೇರಳಕ್ಕೆ ವಾರಕ್ಕೆ 3 ದಿನ ಕಂಟೈನರ್‌ಗಳಲ್ಲಿ ಜಾನುವಾರುಗಳ ರವಾನೆ ಮಾಡಲಾಗುತ್ತಿದೆ. ಈ ದಂಧೆಯ ಹಿಂದೆ ಸ್ಥಳೀಯರಿದ್ದು ಇವರಿಗೆ ಪೊಲೀಸರ ಅಭಯವಿದೆ. ಸೋಮವಾರ, ಗುರುವಾರ, ಶನಿವಾರ ರಾತ್ರಿ ವೇಳೆ ಇಲ್ಲಿಂದ ಕಂಟೈನರ್‌ಗಳಲ್ಲಿ ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಪೊಲೀಸರು ಜಾಣ ಮೌನವಹಿಸಿರುವುದರ ಹಿಂದೆ ದೊಡ್ಡಮಟ್ಟದ ಹಫ್ತಾ ಠಾಣೆಗೆ ಸಲ್ಲಿಕೆಯಾಗುತ್ತಿರುವುದೇ ಕಾರಣ.
ಪ್ರತಿನಿತ್ಯ ಒಂದಲ್ಲ ಒಂದು ಜಾನುವಾರು ಕಳವು ಪ್ರಕರಣಗಳು ನಡೆಯುತ್ತಲೇ ಇದ್ದರೂ ದೂರು ದಾಖಲಿಸಲು ಠಾಣೆಗೆ ತೆರಳುವ ರೈತರಿಗೆ ತಲೆಸವರಿ ಕಳಿಸಲಾಗುತ್ತಿದೆ. ಜಾನುವಾರು ಕಳವು ಜಾಲವೇ ಅಕ್ರಮ ಗೋವು ಸಾಗಾಣಿಕೆ ದಂಧೆಯ ಮೂಲ ಎನ್ನಲಾಗಿದೆ.
ಕಳೆದ 4-5 ತಿಂಗಳಲ್ಲಿ ಜಾನುವಾರುಗಳು ಕಳೆದುಹೋಗಿರುವ 30-40 ಪ್ರಕರಣಗಳಲ್ಲಿ ರೈತರು ಠಾಣೆ ಮೆಟ್ಟಿಲೇರಿರುವರಾದರೂ ಈವರೆಗೆ 4-5 ಜಾನುವಾರು ಕಳವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಜಕಾರಣಿಗಳು, ಪುಡಾರಿಗಳ ಪ್ರಭಾವ ಇರುವ ದೂರುಗಳನ್ನು ಠಾಣಾಧಿಕಾರಿ ದಾಖಲಿಸಿಕೊಳ್ಳುವುದು ಸಾಕಷ್ಟು ಗುಮಾನಿಗಳಿಗೆ ಎಡೆಮಾಡಿಕೊಟ್ಟಿದೆ.
ಕಿಂಗ್ ಪಿನ್ ಉಸ್ಮಾನ್ ಘನಿ : ಉಸ್ಮಾನ್ ಘನಿ ಮೋಸ್ಟ್ ವಾಂಟೆಂಡ್ ಕ್ರಿಮಿನಲ್. ಕರ್ನಾಟಕ, ಕೇರಳ, ತಮಿಳುನಾಡಿನ ಪೊಲೀಸರಿಗೂ ಹಲವು ಪ್ರಕರಣಗಳಲ್ಲಿ ಬೇಕಿದ್ದು, ಅಕ್ರಮದ ಜಾಲದ ಹಿಂದೆ ನೆರಳಾಗಿ ನಿಂತಿದ್ದಾನೆ.
ವಾಹನ ನಂಬರ್ ಪ್ಲೇಟ್‌ಗಳೇ ಬದಲು ; ಅಕ್ರಮ ಜಾನುವಾರು ಕಳ್ಳಸಾಗಣೆ ದಂಧೆಯೇ ಪೊಲೀಸರ ಪಾಲಿಗೆ ಕಾಮಧೇನು ಎನಿಸಿದೆ. ಗೋರಕ್ಷಕರು ಯಾರಾದರೂ ವಾಹನ ಸಮೇತ ಗೋವುಗಳನ್ನು ಹಿಡಿದು ಕೊಟ್ಟರೆ ಅಂತಹವರ ವಿರುದ್ಧ ದೂರು ದಾಖಲಿಸಿಕೊಳ್ಳದೆ ‘ವ್ಯವಹಾರ’ ಕುದುರಿಸಿಕೊಂಡು ಮಾಲು ಸಮೇತ ಬಿಟ್ಟು ಕಳುಹಿಸುತ್ತಾರೆ. ಈ ಜಾಲದಲ್ಲಿ ಮುಂದೆ ಒಂದು ನಂಬರ್ ಪ್ಲೇಟ್ ಇದ್ದರೆ ಹಿಂದೆ ಒಂದು ನಂಬರ್ ಪ್ಲೇಟ್ ಇಟ್ಟುಕೊಂಡು ಓಡಾಡುತ್ತಿದ್ದರೂ ಪೊಲೀಸರು ಕಂಡೂ ಕಾಣದಂತಿರುವುದು ಪರೋಕ್ಷವಾಗಿ ಗೋಕಳ್ಳರ ರಕ್ಷಣೆಗೆ ನಿಂತಂತೆ ಕಾಣುತ್ತದೆ.
ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರೂ ಕಾರ್ಯಾಂಗ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದೆ. ಇಡೀ ಜಿಲ್ಲೆಯಲ್ಲಿ ನೂರಾರು ಅಕ್ರಮ ಕಸಾಯಿಖಾನೆಗಳಿದ್ದರೂ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಅಕ್ರಮ ಜಾನುವಾರು ಸಾಗಾಣಿಕೆೆ ಹೆಚ್ಚಲು ಕಾರಣವಾಗಿದೆ. ಅಧಿಕಾರಿಗಳೇ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಜಿ.ಎಸ್.ಬಸವರಾಜು ರಾಜ್ಯ ಸಂಚಾಲಕ, ಹಿಂದು ಜಾಗರಣ ವೇದಿಕೆ ಅಕ್ರಮ ಜಾನುವಾರು ಸಾಗಣೆ ನಡೆಯುತ್ತಿರುವ ಮಾಹಿತಿ ಇದೆ. ಅಕ್ರಮ ದಂಧೆಯಲ್ಲಿ ತೊಡಗಿರುವವರ ಜತೆ ಹೆಬ್ಬೂರು ಠಾಣೆ ಪೊಲೀಸರು ಶಾಮೀಲಾಗಿದ್ದಾರೆಂಬ ದೂರುಗಳು ನನಗೂ ಕೇಳಿಬಂದಿದ್ದು ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಗೋರಕ್ಷಣೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇನೆ. ರಾಹುಲ್‌ಕುಮಾರ್, ಶಹಾಪೂರವಾಡ್ ಜಿಲ್ಲಾ ಪೊಲೀಸ್ ಅಧೀಕ್ಷಕ