ಸಾಮಾಜಿಕ ಜಾಲತಾಣದಲ್ಲಿ ಬದುಕು ಕಂಡುಕೊಂಡಿರುವ ಯುವ ಸಮೂಹ

HUN-JUNE-11-5(BASAVA JAYANTHI)
ಹುಣಸೂರು ನಗರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಚ್.ಪಿ.ಮಂಜುನಾಥ್, ಶ್ರೀ ನಟರಾಜ ಸಾಮೀಜಿ, ಶ್ರೀ ಸಾಂಬಸದಾಶಿವ ಸ್ವಾಮೀಜಿ, ಡಾ.ವೃಷಭೇಂದ್ರಸ್ವಾಮಿ, ಹಂದನಹಳ್ಳಿ ಸೋಮಶೇಖರ್ ಇದ್ದರು.
Published on

ಹುಣಸೂರು: ನಮ್ಮ ಆಲೋಚನೆ, ಅರಿವು, ಆಚಾರ ಮತ್ತು ಅನುಸರಣೆ ನಿರ್ಮಲವಾಗಿದ್ದಲ್ಲಿ ಬದುಕು ಹಸನಾಗುತ್ತದೆ ಎನ್ನುವುದನ್ನು ಜಗಜ್ಯೋತಿ ಬಸವೇಶ್ವರರು ತಿಳಿಸಿಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಬಸವಸಮಿತಿ ವತಿಯಿಂದ ನಗರದ ಗುರುಬೂದಿ ಮಂಗಳ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವಜಯಂತಿ ಸಮಾರಂಭದಲ್ಲಿ ಮಾತನಾಡಿದರು.

12ನೇ ಶತಮಾನದಲ್ಲಿ ರಚಿತವಾದ ವಚನಗಳು ಇಂದಿಗೂ ಚಿರಸ್ಥಾಯಿಯಾಗಿ ನಿಲ್ಲಲು ವಚನಗಳಲ್ಲಿನ ಸರಳ ಬದುಕಿನ ಮಾರ್ಗದರ್ಶನ ಮತು ಶರಣರ ಸರಳ ಜೀವನಾದರ್ಶಗಳೇ ಕಾರಣ. ಆಡಂಬರದ ಬದುಕಿಗೆ ಮನಸೋತು, ಐಹಿಕ ಭೋಗಗಳಲ್ಲಿ ಮುಳುಗಿರುವ ಯುವಸಮೂಹ ಸಾಮಾಜಿಕ ಜಾಲತಾಣಗಳಲ್ಲಿ ಬದುಕು ಕಂಡುಕೊಂಡಿರುವುದು ದುರಂತ. ನಮ್ಮ ಆಲೋಚನೆಗಳಲ್ಲಿ ಒಳ್ಳೆಯತನ, ಅರಿವಿನ ಹಸಿವು, ಸನ್ನಡತೆ ಮತ್ತು ಒಳ್ಳೆಯದರ ಅನುಸರಣೆಯಿಂದ ಮಾತ್ರ ಬದುಕು ಹಸನಾಗಲು ಸಾಧ್ಯ. ಈ ನಿಟ್ಟಿನಲ್ಲಿ ಬಸವಣ್ಣ ನಮಗೆಲ್ಲರಿಗೂ ದಾರಿದೀಪ ಎಂದರು.

ಗಾವಡಗೆರೆ ಶ್ರೀ ಗುರುಲಿಂಗಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಮಾತನಾಡಿ, ಜಗಜ್ಯೋತಿ ಬಸವಣ್ಣ ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರ ಕ್ರಾಂತಿ ಉಂಟು ಮಾಡಲಿಲ್ಲ. ಬದಲಾಗಿ ಆರ್ಥಿಕ, ಸಾಮಾಜಿಕ, ಅಸ್ಪಶ್ಯತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಂದಿನ ಕಾಲದಲ್ಲೇ ಹೊಸ ಚಿಂತನೆಯನ್ನು ಜನರ ಮನಸಲ್ಲಿ ತುಂಬಿದರು ಎಂದರು.

ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಮಾತನಾಡಿ, ಎಲ್ಲ ವಚನಕಾರರ ವಚನಗಳು ಇಂದಿಗೂ ಚರ್ಚೆಗೆ ಒಳಗಾಗುತ್ತಿವೆ ಅಂದರೆ ವಚನಗಳ ಮಹತ್ವವನ್ನು ನಾವು ತಿಳಿದುಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಬಸವಬಳಗದ ಅಧ್ಯಕ್ಷ ಕೆ.ಎಸ್.ಬಸವರಾಜು, ಡಾ.ವೃಷಭೇಂದ್ರಸ್ವಾಮಿ, ಹಂದನಹಳ್ಳಿ ಸೋಮಶೇಖರ್, ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಮಹಿಳಾ ಬಳಗದ ಸದಸ್ಯರು ಮತ್ತು ಸಮಾಜದ ಬಂಧುಗಳು ಹಾಜರಿದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು.

ವೇದಿಕೆಯಿಂದ ನಿರ್ಗಮಿಸಿದ ಸುತ್ತೂರು ಶ್ರೀಗಳು: ಕಾರ್ಯಕ್ರಮದ ಸಾನ್ನಿಧ್ಯ ವಹಿಸಬೇಕಿದ್ದ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಮುಯಕ್ಕೆ ಸರಿಯಾಗಿ ವೇದಿಕೆಗೆ ಬಂದರು. ಆದರೆ ಮೈಸೂರಿನಲ್ಲಿ ಅನ್ನದಾನೇಶ್ವರ ಶ್ರೀಗಳು ಲಿಂಗೈಕ್ಯರಾದ ಸುದ್ದಿ ತಿಳಿದು ಬಂದ ಕಾರಣದಿಂದ ಸಭೆಯಲ್ಲಿ ಭಾಗವಹಿಸದೆ ಮೈಸೂರಿಗೆ ತೆರಳಿದರು. ಇದೇ ವೇಳೆ ಲಿಂಗೈಕ್ಯ ಶ್ರೀಗಳಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net