ಅಸ್ಸಾಂ ಮೂಲದ ಯುವಕ ಆತ್ಮಹತ್ಯೆ

Suicide
Published on

ವಿರಾಜಪೇಟೆ : ತನ್ನ ಜತೆ ಮದುವೆ ನಿಶ್ಚಯಗೊಂಡಿದ್ದ ಯುವತಿ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ತಿಳಿದು ಇಲಿಪಾಷಾಣ ಸೇವಿಸಿ ಅಸ್ಸಾಂ ಮೂಲದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಸ್ಸಾಂ ಮೂಲದ ದಗಲ್ ಪುರಿಯ ಮಡ್‌ಗಾಂ ನಿವಾಸಿ ಹಾಗೂ ಹಾಲಿ ವಿರಾಜಪೇಟೆ ನಗರದ ಮೊಗರಗಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೂಲಿ ಕಾರ್ಮಿಕ ಅಜರುಲ್ ಇಸ್ಲಾಂ (19) ಆತ್ಮಹತ್ಯೆ ಮಾಡಿಕೊಂಡ ಯುವಕ.

ಅಜರುಲ್ ಇಸ್ಲಾಂ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಮೂರು ತಿಂಗಳ ಹಿಂದೆ ಕೋಳಿ ಮಾಂಸದ ಅಂಗಡಿಯೊಂದರಲ್ಲಿ ಕೋಳಿ ಶುಚಿಗೊಳಿಸುವ ಕೆಲಸಕ್ಕೆ ಸೇರಿಕೊಂಡಿದ್ದ. ಇವನಿಗೆ ಅಸ್ಸಾಂ ಮೂಲದ ಯುವತಿ ಜತೆ ಮದುವೆಯೂ ನಿಶ್ಚಯವಾಗಿತ್ತು. ಉಭಯ ಕುಟುಂಬಗಳು ಮದುವೆಗೆ ಸಮ್ಮತಿ ಸೂಚಿಸಿ ಸಿದ್ಧತೆ ಮಾಡಿಕೊಂಡಿದ್ದವು. ಎರಡು ದಿನಕ್ಕೊಮ್ಮೆ ಯುವತಿಯೊಂದಿಗೆ ಫೋನ್‌ನಲ್ಲಿ ಮಾತನಾಡಿಕೊಂಡು ಖುಷಿಯಿಂದ ಇದ್ದ. ಆದರೆ ಕೆಲವು ದಿನಗಳ ಹಿಂದೆ ಯುವತಿ ನಡವಳಿಕೆ ಬದಲಾಗಿತ್ತು. ಇದರಿಂದ ಅನುಮಾನಗೊಂಡು ಸ್ನೇಹಿತರ ಬಳಿ ಯುವತಿಯ ಬಗ್ಗೆ ವಿಚಾರಿಸಿದ್ದಾನೆ. ಆಗ ತನ್ನ ಜತೆ ಮದುವೆ ನಿಶ್ಚಯವಾಗಿದ್ದರೂ ಬೇರೆ ಪುರುಷನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ವಿಚಾರ ಸ್ನೇಹಿತರಿಂದ ತಿಳಿದುಬಂದಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ಯುವಕ ಸೆ.27 ರಂದು ರಾತ್ರಿ ಕೆಲಸ ಮುಗಿಸಿ ಬಂದು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಳಿಗೆಯಲ್ಲಿ ಕೆಲಸ ಮಾಡುವ ಯುವಕನ ಸ್ನೇಹಿತರು ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಸಂಶಯದಿಂದ ಮನೆಗೆ ಬಂದು ನೋಡಿದಾಗ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ಅಂಗಡಿ ಮಾಲೀಕರ ಜತೆ ತಾನು ಮದುವೆಯಾಗುವ ಯುವತಿ ಬೇರೆ ಪುರುಷನ ಜತೆ ಸಂಬಂಧ ಹೊಂದಿದ್ದಾಳೆ ಎಂದು ಹೇಳಿಕೊಂಡಿದ್ದ ಎಂದು ಅಂಗಡಿ ಮಾಲೀಕರು ವಿಚಾರಣೆ ವೇಳೆ ತಿಳಿಸಿದ್ದಾರೆ. ಕೇರಳದಲ್ಲಿ ಕೆಲಸ ಮಾಡುತ್ತಿದ್ದ ಮೃತನ ಅಣ್ಣ ಕೈರುಲ್ಲಾ ಇಸ್ಲಾಂ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net