ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ

ಕವಿತ
Published on

ಎಚ್.ಡಿ.ಕೋಟೆ: ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ನೇಣುಬಿಗಿದ ಸ್ಥಿತಿಯಲ್ಲಿ ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿಯ ಮೃತದೇಹ ಪತ್ತೆ ಆಗಿದೆ.

ಗ್ರಾಮದ ಪುಟ್ಟಸ್ವಾಮಪ್ಪ ಅವರ ಪುತ್ರಿ ಕವಿತಾ (20) ಮೃತರು. ಮದುವೆ ಒಪ್ಪಂದ ಆಗಿದ್ದ ಯುವತಿಯನ್ನು ಕೊಲೆ ಮಾಡಲಾಗಿದೆ ಎಂದು ಆಕೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ತಾಲೂಕಿನ ಬೂದನೂರು ಗ್ರಾಮದ ಪುಟ್ಟಪ್ಪ ಅವರ ಪುತ್ರ ಜಗ ನಿರಂಜನ ಜತೆ ಯುವತಿಯ ನಿಶ್ಚಿತಾರ್ಥ ಆಗಿತ್ತು. ನಿಶ್ಚಿತಾರ್ಥ ಆದ ನಂತರ ಆರೋಪಿ ಜಗ, ಬೂದನೂರು ಗ್ರಾಮದ ಬದಲು ಹಿರೇಹಳ್ಳಿಯ ಯುವತಿಯ ಮನೆಯಲ್ಲಿ ಹೆಚ್ಚು ಕಾಲ ಇದ್ದ ಎನ್ನಲಾಗಿದೆ.
ಶುಕ್ರವಾರ ಕೂಡ ಜಗ ಯುವತಿಯ ಮನೆಯಲ್ಲಿ ಇದ್ದು, ಪಾಲಕರು ಕೆಲಸಕ್ಕೆ ಹೋಗಿದ್ದಾಗ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ಗಮನಿಸಿದ ಅಕ್ಕಪಕ್ಕದ ಮನೆಯವರು ಶುಂಠಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಪಾಲಕರಿಗೆ ವಿಚಾರ ತಿಳಿಸಿದ್ದಾರೆ. ಆಕೆಯ ತಂದೆ ಮನೆಗೆ ಬಂದು ನೋಡುವಷ್ಟರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಗಳ ಮೃತದೇಹ ಕಂಡುಬಂದಿದೆ. ಆರೋಪಿ ಜಗ ಸ್ಥಳದಿಂದ ಪರಾರಿ ಆಗಿದ್ದು, ಪಾಲಕರು ಎಚ್.ಡಿ.ಕೋಟೆ ಪೋಲಿಸ್ ಠಾಣೆಗೆ ವಿಚಾರ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಮೈಸೂರಿನ ಕೆ.ಆರ್.ಆಸ್ಪತ್ರೆ ಶವಗಾರಕ್ಕೆ ಸಾಗಿಸಿದರು. ಘಟನೆಗೆ ಸಂಬಂಧಿಸಿದಂತೆ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net