ಸಿನಿಮಾ ಶೈಲಿಯಲ್ಲಿ ಯುವಕನ ಬೆನ್ನತ್ತಿದ ಯುವತಿ ಕಡೆಯವರು

beaten on man
Published on

ಹುಬ್ಬಳ್ಳಿ: ಯುವತಿಯನ್ನು ಪ್ರೀತಿಸಿದ ಯುವಕನನ್ನು ಸಿನಿಮಾ ಶೈಲಿಯಲ್ಲಿ ಯುವತಿಯ ಕಡೆಯವರು ಬೆನ್ನು ಹತ್ತಿ ಕುಂದಗೋಳ ರೈಲ್ವೆ ಸ್ಟೇಷನ್ ಹತ್ತಿರ ರೈಲಿನಿಂದ ಹೊರಗೆ ದೂಡಿದ್ದಲ್ಲದೆ, ಬ್ಲೇಡ್​ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಬೆಳಗಾವಿ ಮೂಲದ ಅಮೋಘ ಎಂಬ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆದ ನಂತರ ಅಪಾಯದಿಂದ ಪಾರಾಗಿದ್ದು, ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ಇನ್​ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಗೋಕಾಕ ಮೂಲದ ಯುವತಿಯನ್ನು ಅಮೋಘ ಕಳೆದ 6 ತಿಂಗಳಿಂದ ಪ್ರೀತಿಸುತ್ತಿದ್ದ. ಈ ವಿಚಾರ ಯುವತಿ ಕುಟುಂಬದವರಿಗೆ ಗೊತ್ತಾಗಿ ಪ್ರೀತಿಸುವುದನ್ನು ಬಿಟ್ಟು ಬಿಡು ಎಂದು ಬೆದರಿಕೆ ಹಾಕಿದ್ದರು.

ಇದರಿಂದ ಭಯಗೊಂಡ ಯುವಕ, ಬೆಂಗಳೂರಿಗೆ ಹೋಗಿ ಎರಡು ದಿನ ಸುತ್ತಾಡಿ ಸೆ. 1ರಂದು ಯಶವಂತಪುರದಿಂದ ರೈಲಿನಲ್ಲಿ ಬೆಳಗಾವಿಗೆ ಪ್ರಯಾಣಿಸಿದ್ದ. ಈ ವೇಳೆ ಸುಮಾರು 20 ರಿಂದ 25 ವಯಸ್ಸಿನ ನಾಲ್ವರು, ಯುವತಿಯನ್ನು ಪ್ರೀತಿಸುವುದು ಬಿಟ್ಟು ಬಿಡು, ಇಲ್ಲವಾದರೆ ಸಾಯಿಸಿ ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ರೈಲು ಕುಂದಗೋಳ ರೈಲ್ವೆ ನಿಲ್ದಾಣದ ಹತ್ತಿರ ನಿಧಾನವಾಗಿ ಚಲಿಸುವಾಗ ಗಾಡಿಯಿಂದ ಹೊರಗೆ ತಳ್ಳಿ ನಂತರ ಬ್ಲೇಡ್​ನಿಂದ ಕೈ ಮತ್ತು ಕುತ್ತಿಗೆಗೆ ಇರಿದು ಹಲ್ಲೆ ಮಾಡಿದ್ದಾರೆ. ಗಾಯಗೊಂಡು ನರಳುತ್ತಿದ್ದ ಯುವಕನನ್ನು ಸ್ಥಳೀಯರು ಕುಂದಗೋಳ ತಾಲೂಕು ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ಕಿಮ್ಸ್​ಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಯುವಕನ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಹಲ್ಲೆ ಮಾಡಿದವರು ಯಾರೆಂದು ತಿಳಿದು ಬಂದಿಲ್ಲ. ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಹುಬ್ಬಳ್ಳಿ ರೈಲ್ವೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net