ಪ್ರೇಯಸಿಗೆ ಹೆದರಿ ಮೆಹಂದಿ ದಿನ ನಾಪತ್ತೆಯಾದ ಯುವಕ ಪತ್ತೆ

Youth Missing
ಕಿಶನ್ ಶೆಟ್ಟಿ
Published on

ಉಳ್ಳಾಲ: ಮೆಹಂದಿ ದಿನ ನಾಪತ್ತೆಯಾಗಿದ್ದ ವರ್ಕಾಡಿ ದೇವಂದಪಡ್ಪುವಿನ ಯುವಕನನ್ನು ಕೊಣಾಜೆ ಪೊಲೀಸರು ಠಾಣೆಗೆ ಕರೆದು ತಂದು ಮನೆಮಂದಿಗೆ ಒಪ್ಪಿಸಿದ್ದಾರೆ.

ಮೇ 31ರಂದು ಉದ್ಯಮಿ ಐತಪ್ಪ ಶೆಟ್ಟಿ ಅವರ ಪುತ್ರ ಕಿಶನ್ ಶೆಟ್ಟಿಯ ಮೆಹಂದಿ ಶಾಸ್ತ್ರ ಮೇ 31ರಂದು ಅಯೋಜಿಸಲಾಗಿದ್ದು, ಮರುದಿನ ಮದುವೆ ನಿಗದಿಯಾಗಿತ್ತು. ಮೆಹಂದಿ ದಿನ ಹಣ್ಣು ತರಲೆಂದು ಹೋಗಿದ್ದ ಆತ ನಾಪತ್ತೆಯಾಗಿದ್ದು ಹಲವು ಊಹಾಪೋಹಗಳನ್ನು ಸೃಷ್ಟಿಸಿತ್ತು. ಕಿಶನ್ ಶೆಟ್ಟಿ ಕುಂಜತ್ತೂರು ಬಳಿಯ ಅನ್ಯಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದು, ಆದರೂ ಬೇರೊಂದು ಯುವತಿ ಜತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಬಳಿಕ ಪ್ರೀತಿಸಿದ ಯುವತಿಯನ್ನು ತಿರಸ್ಕರಿಸುತ್ತಾ ಬಂದಿದ್ದ ಎನ್ನಲಾಗಿದೆ. ಅದರಿಂದ ಕೆರಳಿದ ಯುವತಿ ತನ್ನ ಬಿಟ್ಟು ಬೇರೆ ಯಾರನ್ನಾದರೂ ಮದುವೆಯಾದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಅಥವಾ ಮದುವೆ ಮಂಟಪಕ್ಕೆ ಬಂದು ಎಲ್ಲರೆದುರು ಪ್ರೀತಿಯ ಕತೆ ತಿಳಿಸುವುದಾಗಿ ಬೆದರಿಕೆ ಒಡ್ಡಿದ್ದಳು ಎನ್ನಲಾಗಿದ್ದು, ಈ ಕಾರಣದಿಂದ ಕಿಶನ್ ನಾಪತ್ತೆಯಾಗಿದ್ದ ಎಂದು ಹೇಳಲಾಗಿತ್ತು.

ನಾಪತ್ತೆಯಾದ ಕೆಲವು ದಿನಗಳ ಬಳಿಕ ತಂಗಿಯ ಮೊಬೈಲ್‌ಗೆ ಸಂದೇಶ ಕಳುಹಿಸಿ 'ನಾನು ಬಳ್ಳಾರಿಯಲ್ಲಿದ್ದೇನೆ, ಇನ್ನು ಮುಂದೆ ಎಂದಿಗೂ ಮನೆಗೆ ಬರುವುದಿಲ್ಲ' ಎಂದು ಸಂದೇಶ ರವಾನಿಸಿದ್ದ. ಆದರೆ ಆತನಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದನು. ಟವರ್ ಲೊಕೇಶನ್ ಆಧಾರದಲ್ಲಿ ಕಿಶನ್ ಶುಕ್ರವಾರ ಬೆಂಗಳೂರಿನಲ್ಲಿರುವ ಮಾಹಿತಿ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಬೆಂಗಳೂರಿನ ಲಾಡ್ಜ್‌ವೊಂದರಲ್ಲಿದ್ದ ಆತನನ್ನು ವಶಕ್ಕೆ ಪಡೆದು ಕರೆತಂದು ಪಾಲಕರಿಗೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net