ಬೇಸಾಯದಲ್ಲಿ ಯಶ ಕಂಡ ಯುವಕ

K-2
Published on

ಮದ್ದೂರು: ಮಿಶ್ರ ಬೇಸಾಯದಲ್ಲಿ ವಿವಿಧ ಬೆಳೆ ಬೆಳೆದು ಇಲ್ಲೊಬ್ಬ ಯುವ ರೈತ ವಾರ್ಷಿಕವಾಗಿ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ. ಆ ಮೂಲಕ ಕೃಷಿಯಲ್ಲಿ ಹಂತ, ಹಂತವಾಗಿ ಸಾಧನೆ ಮಾಡುತ್ತಿದ್ದಾರೆ.

ತಾಲೂಕಿನ ಕಬ್ಬಾರೆ ಗ್ರಾಮದ ಪಾಪಣ್ಣ ಅವರ ಪುತ್ರ ಯುವ ರೈತ ಕೆ.ಪಿ.ಸಂತೋಷ್ ಅವರಿಗೆ 6 ಎಕರೆ ಜಮೀನಿದ್ದು, 2 ಎಕರೆಯಲ್ಲಿ ಬಾಳೆ, 2 ಎಕರೆ ಪ್ರದೇಶದಲ್ಲಿ ಕಬ್ಬು, 20 ಗುಂಟೆ ಪ್ರದೇಶದಲ್ಲಿ ಟೊಮ್ಯಾಟೋ, 10 ಗುಂಟೆ ಪ್ರದೇಶದಲ್ಲಿ ವೀಳ್ಯದೆಲೆ, 70 ತೆಂಗಿನ ಮರಗಳು, 1500 ಅಡಕೆ ಮರಗಳನ್ನು ಬೆಳೆಯುವ ಮೂಲಕ ಕೈ ತುಂಬಾ ಸಂಪಾದನೆ ಮಾಡುತ್ತಿದ್ದಾರೆ.

ಇವರು ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಬಳಸುವುದಿಲ್ಲ. ಬದಲಿಗೆ ಇವರೇ ತಮ್ಮ ತೋಟದಲ್ಲಿ ಸಿಗುವ ನಿರುಪಯುಕ್ತವಾದ ತೆಂಗಿನಗರಿ, ಅಡಕೆಗರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಚೆನ್ನಾಗಿ ತೋಟದಲ್ಲಿ ಒಣಗಿಸಿ ಕೊಟ್ಟಿಗೆ ಗೊಬ್ಬರ ರೀತಿಯಲ್ಲಿ ಮಾಡುತ್ತಾರೆ. ಇದನ್ನೇ ಬೆಳೆಗಳಿಗೆ ಹಾಕುವ ಮೂಲಕ ಉತ್ತಮ ಫಸಲು ತೆಗೆಯುತ್ತಿದ್ದಾರೆ. ಇದರ ಜತೆಗೆ ಎರೆಹುಳು ಗೊಬ್ಬರ ತಯಾರಿಕಾ ಘಟಕವಿದ್ದು, ಎರೆಹುಳು ಗೊಬ್ಬರ ತಯಾರು ಮಾಡುತ್ತಿದ್ದಾರೆ.

ಇವರು ಬೆಳೆಯುವ ಬಾಳೆ ಹಾಗೂ ವೀಳ್ಯದೆಲೆಗೆ ತುಂಬಾ ಬೇಡಿಕೆ ಇದ್ದು, ಜಮೀನಿನ ಬಳಿಯೇ ಬಂದು ಬಾಳೆ ಮತ್ತು ವೀಳ್ಯದೆಲೆಯನ್ನು ಖರೀದಿ ಮಾಡುಕೊಂಡು ಹೋಗುವುದು ವಿಶೇಷ. ಟೊಮ್ಯಾಟೋ ಬೆಳೆಗೆ ಕೆಲ ದಿನಗಳ ಹಿಂದೆ ಬಹಳ ಬೇಡಿಕೆ ಇತ್ತು. ಆಗ ಉತ್ತಮ ಲಾಭ ಬಂತು. ಈಗ ಬೇಡಿಕೆ ಕಡಿಮೆ ಹಾಗೂ ಬೆಲೆ ಕಡಿಮೆಯಾಗಿದೆ. ಉಳಿದಂತೆ ಕಬ್ಬು ಉತ್ತಮವಾಗಿ ಬೆಳೆಯುತ್ತಿದ್ದು, ಕಾರ್ಖಾನೆಗೆ ಸರಬರಾಜು ಮಾಡುತ್ತಾರೆ. ಇವರು ಬೆಳೆಯುವ ಅಡಕೆ ಮತ್ತು ತೆಂಗಿಗೂ ಉತ್ತಮ ಬೇಡಿಕೆಯಿದೆ.

ಕೃಷಿಗೆ 9 ಬೋರ್‌ವೆಲ್‌ಗಳನ್ನು ಕೊರಿಸಿದ್ದರು. ಆದರೆ, 7 ಬೋರ್‌ವೆಲ್ ಕೆಟ್ಟಿಹೋಗಿ ಸುಮಾರು 6 ಲಕ್ಷ ರೂ. ನಷ್ಟ ಉಂಟಾಯಿತು. 2 ಬೋರ್‌ವೆಲ್‌ನಲ್ಲಿ ಮಾತ್ರ ನೀರು ಬಂದು ಈ ನೀರಿನಲ್ಲಿ ಹನಿ ನೀರಾವರಿ ಮಾಡುವ ಮೂಲಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅವಶ್ಯಕತೆ ಇದ್ದಾಗ ಮಾತ್ರ ಕೂಲಿ ಕಾರ್ಮಿಕರನ್ನು ಆಶ್ರಯಿಸುತ್ತಾರೆ. ಉಳಿದ ಸಮಯದಲ್ಲಿ ಇಡೀ ಕುಟುಂಬವೇ ಇವರಿಗೆ ಸಾಥ್ ನೀಡುವ ಮೂಲಕ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಇದರಿಂದ ಸಂತೋಷ್ ಅವರು ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net