

ಕೆ.ಆರ್.ಸಾಗರ: ಕೆ.ಆರ್.ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ನಾರ್ತ್‌ಬ್ಯಾಂಕ್ ಗ್ರಾಮದ ಬಳಿಯ ಕೆ.ಆರ್.ಸಾಗರ-ಪಾಂಡವಪುರ ರಸ್ತೆಯಲ್ಲಿನ ಮೀನು ಮಾರಟ ಮಳಿಗೆಯಲ್ಲಿ ಭಾನುವಾರ ಸಂಜೆ ಸ್ನೇಹಿತನಿಂದ ಚಾಕು ಇರಿತಕ್ಕೊಳಗಾಗಿದ್ದ ಯುವಕ ಚಿಕಿತ್ಸೆಗೆ ಫಲಿಸದೆ ಸೋಮವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ.
ಚಿನಕುರಳಿ ಹೋಬಳಿಯ ಕುಂಬಾರಕೊಪ್ಪಲು ಗ್ರಾಮದ ಅರುಣ್ (27) ಮೃತಪಟ್ಟವ. ತನ್ನ ಸ್ನೇಹಿತ ಚಿನಕುರಳಿ ಹೋಬಳಿಯ ಸಣಬ ಗ್ರಾಮದ ಸುಮಂತ್‌ನೊಂದಿಗೆ (25) ಮದ್ಯ ಸೇವನೆ ಮಾಡಿ ಮೀನು ಸೇವಿಸುತ್ತಿದ್ದಾಗ ಅರುಣ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಇದರಿಂದ ಸುಮಂತ್ ಪಕ್ಕದ ಮೀನಿನ ಮಳಿಗೆಯಲ್ಲಿಟ್ಟಿದ್ದ ಚಾಕು ತಂದು ಹೊಟ್ಟೆಗೆ ಚುಚ್ಚಿ ಕೆಳಗೆ ಬೀಳಿಸಿದ್ದಾನೆ. ಬಳಿಕ ಕಲ್ಲಿನಿಂದ ಮುಖವನ್ನು ಜಜ್ಜಿದ್ದಾನೆ. ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪಿಎಸ್‌ಐ ರಮೇಶ ಕರಕಿಕಟ್ಟಿ ಆರೋಪಿಯನ್ನು ವಶಕ್ಕೆ ಪಡೆದಿದರಲ್ಲದೆ, ತೀವ್ರವಾಗಿ ಗಾಯಗೊಂಡಿದ್ದ ಅರುಣ್‌ನನ್ನು ತುರ್ತು ವಾಹನದ ಮೂಲಕ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು.