

ಹುಬ್ಬಳ್ಳಿ: ಗಾಂಜಾ ಮಾರಾಟ ಚಟುವಟಿಕೆಯಲ್ಲಿ ತೊಡಗಿದ್ದ ನಗರದ ಯಲ್ಲಾಪುರ ಓಣಿಯ ತತ್ತಿಪೂರ ಚಾಳದ ನಿವಾಸಿ ಸಾಹಿಲ್ ಅಲಿಯಾಸ್ ಸಾಹಿಲ ಚಡ್ಡಾ (22) ಎಂಬಾತನನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ 6 ತಿಂಗಳವರೆಗೆ ಗಡಿಪಾರು ಮಾಡಲಾಗಿದೆ.
ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನ ಮೇಲೆ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಸಿಆರ್ಪಿಸಿ ಕಾಯ್ದೆಯಡಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಗಾಂಜಾ ಮಾರಾಟ ಮಾಡುವ ತನ್ನ ವರಸೆ ಬಿಟ್ಟಿರಲಿಲ್ಲ. ಆದ್ದರಿಂದ ಈತನ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು.
ಹಳೇ ಚಾಳಿ ಮುಂದುವರಿಸಿದ್ದ ಈತ ಮತ್ತೆ ಗಾಂಜಾ ಮಾರಾಟ ಮಾಡುವ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆಗ ಸಿಆರ್ಪಿಸಿ ಕಾಯ್ದೆಯಡಿ ಮುಚ್ಚಳಿಕೆ ಪತ್ರದನ್ವಯ 65,000 ರೂ. ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದಲ್ಲದೆ, ಈತನನ್ನು ನ್ಯಾಯಾಂಗ ಬಂಧನಕ್ಕೂ ಒಳಪಡಿಸಲಾಗಿತ್ತು.
ಜೈಲು ಶಿಕ್ಷೆ ಅನುಭವಿಸಿ ಹೊರಬಂದರೂ ತನ್ನ ಅಪರಾಧಿಕ ಪ್ರವೃತ್ತಿ ಮುಂದುವರಿಸಿದ್ದ. ಆದ್ದರಿಂದ ಈತನಿಗೆ ತಕ್ಕಪಾಠ ಕಲಿಸುವ ಉದ್ದೇಶದಿಂದ 6 ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ.