ಯುವಕನ ಬೆತ್ತಲೆಗೊಳಿಸಿ ಹಲ್ಲೆ

h11-Hubballi Crime 2
Published on

ಹುಬ್ಬಳ್ಳಿ: ಪುಡಿರೌಡಿಗಳ ಗುಂಪು ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆಗೈದು ಅಟ್ಟಹಾಸ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಒಬ್ಬ ಅಸಹಾಯಕನನ್ನು ಹಲವರು ಹಿಂಸಿಸಿ ವಿಕೃತಿ ಮೆರೆಯುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಹುಬ್ಬಳ್ಳಿಯಲ್ಲೇ ನಡೆದಿದ್ದು ಎಂದು ಗೊತ್ತಾಗುತ್ತಿದ್ದಂತೆ ವಾಣಿಜ್ಯ ನಗರಿ ಬೆಚ್ಚಿಬಿದ್ದಿದೆ.

ಕ್ರೂರ ಹಿಂಸೆ ಮತ್ತು ಅವಮಾನಕ್ಕೆ ಗುರಿಯಾಗಿರುವ ಯುವಕನನ್ನು ಧಾರವಾಡ ಮೂಲದ ಸಂದೀಪ ಸೋಳಂಕಿ ಎಂದು ಗುರುತಿಸಲಾಗಿದೆ. ಈತನನ್ನು ಬೈಯುತ್ತ ಕೆಲವರು ಹಲ್ಲೆ ಮಾಡಿರುವ ದೃಶ್ಯವನ್ನು ಮೊಬೈಲ್ ಫೋನ್​ನಲ್ಲಿ ಸೆರೆ ಹಿಡಿಯಲಾಗಿದೆ. ದುರುಳರು ಮರಾಠಿ ಹಾಗೂ ಕನ್ನಡದಲ್ಲಿ ಮಾತನಾಡಿದ್ದಾರೆ. ಅಣ್ಣಾ... ನನ್ನನ್ನು ಬಿಟ್ಟುಬಿಡಿ ಎಂದು ಸಂದೀಪ ಕೈ ಮಗಿದು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದರೂ ದುಷ್ಕರ್ವಿುಗಳು ಕೂದಲು ಹಿಡಿದು ಜಗ್ಗುವುದು, ಕಿಬ್ಬೊಟ್ಟೆಗೆ ಹೊಡೆಯುವುದು ವಿಡಿಯೋದಲ್ಲಿದೆ. ಯಾವುದೇ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಲು ಪೊಲೀಸ್, ಕಾನೂನು ಇರುವ ವ್ಯವಸ್ಥೆಯಲ್ಲೇ ಬದುಕುತ್ತಿರುವವರು ಘೊರವಾಗಿ ಯುವಕನನ್ನು ಹಿಂಸಿಸಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತಪವಾಗುತ್ತಿದೆ.

ಈ ವಿಡಿಯೋ ತುಣುಕು ಪೊಲೀಸರಿಗೂ ತಲುಪಿದೆ.

ಫೀಲ್ಡಿಗಿಳಿದ ಆಯುಕ್ತ:

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸ್ ಆಯುಕ್ತ ಸಂತೋಷಬಾಬು ಸ್ವತಃ ಫೀಲ್ಡಿಗಿಳಿದಿದ್ದಾರೆ. ಘಟನೆ ಸಂಬಂಧ ಐವರು ದುಷ್ಕರ್ವಿುಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೂರು -ನಾಲ್ಕು ತಿಂಗಳ ಹಿಂದೆ ಧಾರವಾಡ ಮೂಲದ ಸಂದೀಪ ಸೋಳಂಕಿ ಎಂಬಾತನನ್ನು ಹುಬ್ಬಳ್ಳಿಯಲ್ಲಿ ಹಿಂಸಿಸಲಾಗಿತ್ತು ಎನ್ನುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.

ಸ್ವಯಂ ಪ್ರೇರಿತ ದೂರಿಗೆ ಸಿದ್ಧ:

ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹು-ಧಾ ಪೊಲೀಸ್ ಆಯುಕ್ತ ಸಂತೋಷಬಾಬು, ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಸೆಟ್ಲಮೆಂಟ್​ನಲ್ಲಿ 3-4 ತಿಂಗಳ ಹಿಂದೆ ಈ ಘಟನೆ ನಡೆದಿರುವ ಅನುಮಾನವಿದೆ. ಹಲ್ಲೆಗೀಡಾದ ಯುವಕ ಧಾರವಾಡದವ ಎನ್ನಲಾಗುತ್ತಿದೆ. ಆತ ಇನ್ನೂ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಸಂತ್ರಸ್ತ ದೂರು ನೀಡಿದರೆ ಸರಿ, ಇಲ್ಲದಿದ್ದರೆ ನಾವೇ ಸ್ವಯಂ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ. ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದರು.

ಪ್ರಜ್ವಲ್, ವಿನಾಯಕ, ಗಣೇಶ, ಸಚಿನ್ ಹಾಗೂ ಮಂಜುನಾಥ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದು ಅತ್ಯಂತ ಹೀನ ಕೃತ್ಯ. ಪ್ರಜ್ವಲ್ ಎಂಬಾತ ತನ್ನ ತಾಯಿಯ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದ. ಇದಕ್ಕೆ ಸಂದೀಪ ಎಂಬಾತ ಅವಾಚ್ಯ ಪದಗಳಿನಿಂದ ನಿಂದಿಸಿದ್ದ. ಇದೇ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಸಂದೀಪನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಲಾಗಿದೆ ಎಂದು ಇದುವರೆಗಿನ ವಿಚಾರಣೆಯಿಂದ ತಿಳಿದುಬಂದಿದೆ ಎಂದರು.

ಅತ್ಯಾಚಾರ ಎಸಗಿದರೆ?

ಆರೋಪಿಗಳು ವಿಕೃತ ಮನಸಿನವರು ಎಂದು ಕಂಡುಬಂದಿರುವುದರಿಂದ, ಸಂದೀಪನನ್ನು ವಿವಸ್ತ್ರಗೊಳಿಸಿ ಅತ್ಯಾಚಾರ ಎಸಗಿರಬಹುದೇ ಎಂಬ ಪ್ರಶ್ನೆಯನ್ನೂ ಇಟ್ಟುಕೊಂಡು ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಲಾಗಿದೆ. ಯುವಕನ ಮೇಲೆ ಮೃಗೀಯ ವರ್ತನೆ ಮಾಡಿದಂತೆ ಕಂಡುಬರುವ ಅಸ್ಪಷ್ಟ ವಿಡಿಯೋ ತುಣುಕು ಸಹ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ. ತನಿಖೆ ಮುಂದುವರಿದಿದ್ದು, ಶೀಘ್ರದಲ್ಲಿ ಮತ್ತಿಷ್ಟು ಮಾಹಿತಿ ಹೊರಬರುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net