ಮೈಸೂರು: ಹುಡುಗಿ ಚುಡಾಯಿಸಿದ ಹಿನ್ನೆಲೆಯಲ್ಲಿ ಉಂಟಾದ ಗಲಾಟೆಯಲ್ಲಿ ಗೂಡ್ಸ್ ಆಟೋ ಚಾಲಕನನ್ನು ಕೊಲೆ ಮಾಡಲಾಗಿದೆ. ಮೈಸೂರು ತಾಲೂಕಿನ ಮಂಡಕಳ್ಳಿಯ ಗೂಡ್ಸ್ ಆಟೋ ಚಾಲಕ ರವಿಚಂದ್ರ(33) ಕೊಲೆಯಾದವರು.
ರೌಡಿ ಶೀಟರ್ ಸುನೀಲ್ ರಾಜ್ ಹಾಗೂ ಆತನ ತಮ್ಮ ನಿಖಿಲ್ ರಾಜ್, ಇವರ ಚಿಕ್ಕಪ್ಪ ನಾರಾಯಣ ಕೊಲೆ ಆರೋಪಿಗಳು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತ ರವಿಚಂದ್ರನ ತಮ್ಮ ಶಿವರಾಜ್ ಗಾರೆ ಕೆಲಸ ಮಾಡಿಕೊಂಡಿದ್ದು, ಈತನ ಸ್ನೇಹಿತನೊಬ್ಬ ಸುನೀಲ್‌ರಾಜ್ಗೆ ಪರಿಚಯ ಇರುವ ಹುಡುಗಿಯನ್ನು ಚುಡಾಯಿಸಿದ್ದಾನೆ. ಈ ವೇಳೆ ಗಲಾಟೆ ಆಗಿದ್ದು ಶಿವರಾಜ್ ಮಧ್ಯೆ ಪ್ರವೇಶಿಸಿ ಗಲಾಟೆ ಬಿಡಿಸಿದ್ದ. ಇದರಿಂದ ದ್ವೇಷ ಬೆಳೆಸಿಕೊಂಡ ಸುನೀಲ್‌ರಾಜ್ ಹಾಗೂ ನಿಖಿಲ್ರಾಜ್ ಶುಕ್ರವಾರ ರಾತ್ರಿ ಚಿಕ್ಕಪ್ಪ ನಾರಾಯಣ್ ಜತೆ ರವಿಚಂದ್ರ ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾರೆ. ಇದರಿಂದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಡ್ರಾೃಗರ್‌ನಿಂದ ಸುನೀಲ್‌ರಾಜ್ ರವಿಚಂದ್ರನ ಹೊಟ್ಟೆಗೆ ಇರಿದಿದ್ದಾನೆ ಎನ್ನಲಾಗಿದೆ.
ಜಗಳ ಬಿಡಿಸಲು ಬಂದ ಶಿವರಾಜ್ ಹಾಗೂ ಮಾವ ಮಹೇಶ್‌ಗೂ ಗಾಯವಾಗಿದೆ. ಚಾಕು ಇರಿತದಿಂದ ಗಾಯಗೊಂಡ ರವಿಚಂದ್ರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.