ಕಾಸರಗೋಡು: ಮದ್ಯ ಸಿಗದ ಹಿನ್ನೆಲೆಯಲ್ಲಿ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಬೆದರಿಕೆಯೊಡ್ಡಿದ ತಿರುವನಂತಪುರ ನಿವಾಸಿ ಸಜಿನ್ ಅಲಿಯಾಸ್ ಉಣ್ಣಿ(34) ಎಂಬಾತನನ್ನು ಕೊನೆಗೂ ನೆರೆದವರು ಮನವೊಲಿಸಿ ಟವರ್‌ನಿಂದ ಕೆಳಗಿಳಿಸಿದ್ದಾರೆ.
ಕಾಸರಗೋಡಿನ ಐ.ಸಿ ಭಂಡಾರಿ ರಸ್ತೆ ಸನಿಹ ಸರ್ಕಾರಿ ಮದ್ಯ ಮಾರಾಟ ಕೇಂದ್ರಕ್ಕೆ ಗುರುವಾರ ಸಂಜೆ ಆಗಮಿಸಿದ್ದನು. ಅಲ್ಲಿ ಮದ್ಯ ಸಿಗದಿರುವುದರಿಂದ ಆಕ್ರೋಶಗೊಂಡು ಸನಿಹದ ಮೊಬೈಲ್ ಟವರ್ ಏರಿದ್ದಾನೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅಗ್ನಿಶಾಮಕದಳದೊಂದಿಗೆ ಸ್ಥಳಕ್ಕಾಗಮಿಸಿದ್ದರು. ಇಳಿಯುವಂತೆ ಮನವೊಲಿಸಿದರೂ ಪ್ರಯೋಜವಾಗಿಲ್ಲ. ಟವರ್‌ನ ತುತ್ತ ತುದಿಗೇರಿದ ಆತ ಜಿಗಿಯುವುದಾಗಿ ಬೆದರಿಕೆಯೊಡ್ಡಿದ್ದಾನೆ. ಟವರ್‌ನ ಅರ್ಧದವರೆಗೆ ಏರಿದ್ದ ಅಗ್ನಿಶಾಮಕದಳ ಸಿಬ್ಬಂದಿ ಕೆಳಗಿಳಿಯಬೇಕಾಗಿ ಬಂದಿತ್ತು.
ಯುವಕನ ದಾಂಧಲೆ ಕಾಣಲು ನೂರಾರು ಜನರು ಟವರ್ ಕೆಳಗೆ ಒಟ್ಟು ಸೇರಿದ್ದರು. ಕೊನೆಗೆ ಯಾರೋ ಒಬ್ಬರು ಮದ್ಯ ನೀಡುವುದಾಗಿ ಭರವಸೆ ನೀಡಿದ ಬಳಿಕ ಕೆಳಗಿಳಿದಿದ್ದಾನೆ. ಕಾಸರಗೋಡು ನಗರ ಠಾಣೆ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಕೆಲದಿನಗಳ ಹಿಂದೆ ಕಾಸರಗೋಡಿಗೆ ಆಗಮಿಸಿದ ಆತ ನಗರದ ಹೊಸ ಬಸ್ ನಿಲ್ದಾಣ ವಠಾರದಲ್ಲಿ ಸುತ್ತಾಡುತ್ತಿದ್ದು, ರಾತ್ರಿ ಅಂಗಡಿ ವರಾಂಡದಲ್ಲಿ ಮಲಗುತ್ತಿದ್ದನು.