ಆಲೂರು: ವಲ್ಲಹಳ್ಳಿಯಲ್ಲಿ ಕಾಡಾನೆ ದಾಳಿಯಿಂದ ಸಣ್ಣಪುಟ್ಟ ಗಾಯಗಳಾಗಿ ಕೂದಲೆಳೆ ಅಂತರದಲ್ಲಿ ಯುವಕ ಪಾರಾಗಿ ಜೀವ ಉಳಿಸಿಕೊಂಡಿದ್ದಾನೆ.
ತಾಲೂಕಿನ ಪಾಳ್ಯ ಹೋಬಳಿ ವಲ್ಲಹಳ್ಳಿ ಗ್ರಾಮದ ಮಲ್ಲಿಕಾರ್ಜುನ (26) ಕಾಡಾನೆ ದಾಳಿಗೆ ಸಿಲುಕಿ ಸಣ್ಣಪುಟ್ಟ ಗಾಯಗಳಾಗಿ ಪ್ರಾಣ ಉಳಿಸಿಕೊಂಡವರು.
ಮಂಗವಾರ ಬೆಳಗ್ಗೆ ಮನೆಯ ಹತ್ತಿರ ಇರುವ ಜೋಳದ ಹೊಲದಲ್ಲಿ ಹಸುಗಳಿಗೆ ಮೇವು ತರಲು ಹೋಗಿದ್ದರು. ಈ ವೇಳೆ ಗ್ರಾಮದಲ್ಲಿ ದಿಢೀರ್ ಪ್ರತ್ಯಕ್ಷವಾದ ಒಂಟಿಸಲಗವನ್ನು ಓಡಿಸಲು ಸ್ಥಳೀಯರು ಗಾಬರಿಯಿಂದ ಕೂಗಾಡಿದ್ದರಿಂದ ಕಾಡಾನೆ ಜೋಳದ ಹೊಲದತ್ತ ನುಗ್ಗಿದೆ. ಹೊಲದಲ್ಲಿ ಹುಲ್ಲು ಕೊಯ್ಯುತ್ತಿದ್ದ ಮಲ್ಲಿಕಾರ್ಜುನ್ ಮೇಲೆ ಏಕಾಏಕಿ ದಾಳಿ ನಡೆಸಲು ಕಾಡಾನೆ ಮುಂದಾಗಿದೆ. ಈ ವೇಳೆ ಆನೆ ಕಂಡು ಮಲ್ಲಿಕಾರ್ಜುನ್ ಗಾಬರಿಯಿಂದ ಓಡಿ ಹೋಗುವಾಗ ಬಿದ್ದು ಕೈಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಆತನನ್ನ ಚಿಕಿತ್ಸೆಗೆಂದು ಆಲೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಅಲ್ಲದೆ ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡ ಮಲ್ಲಿಕಾರ್ಜುನನಿಗೆ ಚಿಕಿತ್ಸೆ ಕೊಡಿಸಿದ್ದಾರೆ.