ತಾಯಿ ಮಡಿಲು ಸೇರಿದ ತಮಿಳುನಾಡಿನ ಯುವಕ

Sub_Thayi madilu
Published on

ಸುಬ್ರಹ್ಮಣ್ಯ: ಹಲವು ತಿಂಗಳುಗಳಿಂದ ಪುಟ್‌ಪಾತ್‌ನಲ್ಲಿ ಜೀವನ ಕಳೆಯುತ್ತಿದ್ದ ಯುವಕನನ್ನು ಭಾಷಾ ಸಂಹವನ ಕೊರತೆಯ ನಡುವೆಯೂ ಮನೆಯವರ ಜತೆ ಸೇರಿಸುವಲ್ಲಿ ಸುಬ್ರಹ್ಮಣ್ಯದ ಪುರೋಹಿತರೊಬ್ಬರು ಯಶಸ್ವಿಯಾಗಿದ್ದಾರೆ. ವೃತ್ತಿಯಲ್ಲಿ ಅರ್ಚಕರಾಗಿರುವ ಪ್ರವೃತ್ತಿಯಲ್ಲಿ ಹವ್ಯಾಸಿ ಪತ್ರಕರ್ತರಾಗಿರುವ ಶಿವ ಭಟ್ ಅಪರಿಚಿತ ವ್ಯಕ್ತಿ ಯುವಕ ತಾಯಿ ಮಡಿಲು ಸೇರುವಂತೆ ಮಾಡಿದ್ದಾರೆ.

ಸುಬ್ರಹ್ಮಣ್ಯದ ರಸ್ತೆಬದಿಯಲ್ಲಿ ಮಳೆಯಲ್ಲೇ ನೆನೆಯುತ್ತಾ ಮಲಗಿದ್ದ ಯುವಕನನ್ನು ವಿಚಾರಿಸಿದ ವೇಳೆ ಆತ ತಮಿಳು ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿ ತಾನು ಒಂದು ತಿಂಗಳಿನಿಂದ ಇಲ್ಲಿರುವುದಾಗಿ ತಿಳಿಸಿದ್ದನು. ಕೂಡಲೇ ಪಿಡಿಒ ಮಹೇಶ್ ಅವರಿಗೆ ಮಾಹಿತಿ ನೀಡಿದಾಗ ರಕ್ಷಣೆಗಾಗಿ ಸಾಮಾಜಿಕ ಮುಂದಾಳು ರವಿ ಕಕ್ಕೆಪದವು ಮತ್ತು ಗ್ರಾ.ಪಂ ಸದಸ್ಯ ಹರೀಶ್ ಇಂಜಾಡಿ ಆಗಮಿಸಿದ್ದರು. ಆತನಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ನೀಡಿ ಉಪಹಾರ ಒದಗಿಸಿದ್ದರು. ಬಳಿಕ ತಮಿಳಿನಲ್ಲಿ ಅಸ್ಪಷ್ಟವಾಗಿ ಕೊಯಮುತ್ತೂರು ಎಂದು ಹೇಳಿದಾಗ ಅಲ್ಲಿನ ಪತ್ರಕರ್ತರನ್ನು ಸಂಪರ್ಕಿಸಿದರು. ಜತೆಗೆ ಅಲ್ಲಿನ ಮಹೇಂದ್ರನ್ ಎಂಬುವರು ನಡೆಸುವ ಎನ್.ಜಿ.ಒ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಆತ ಹೇಳಿದ ವಿಳಾಸವನ್ನು ತಾಳೆ ಮಾಡಿದಾಗ ಕೊಯಂಬತ್ತೂರು ಗಾಂಧಿನಗರ ಆರ್.ಎಸ್.ಪುರಂ ಎಂಬುದು ಸ್ಪಷ್ಟವಾಯಿತು.

ಸಂಸ್ಥೆಯ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿ ಯುವಕನ ತಾಯಿ ಸರಸ್ವತಿಯ ಜತೆ ಮಾತನಾಡಿದ್ದರು. ಬಳಿಕ ಯುವಕನನ್ನು ಬೆಂಗಳೂರಿನ ಜನಸ್ನೇಹಿ ಸೇವಾಶ್ರಮಕ್ಕೆ ಕಳುಹಿಸಲಾಯಿತು. ಬೆಂಗಳೂರಿಗೆ ಶನಿವಾರ ಬಂದ ತಾಯಿ ಸರಸ್ವತಿ ಜನಸ್ನೇಹಿ ಕೇಂದ್ರದಲ್ಲಿ ಮಗನನ್ನು ಕಂಡು ಗದ್ಗದಿತರಾದರು.

ಕುಕ್ಕೆ ಸುಬ್ರಹ್ಮಣ್ಯ ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ, ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್, ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ., ಸದಸ್ಯ ಹರೀಶ್ ಇಂಜಾಡಿ, ಸಮಾಜಸೇವಕ ರವಿ ಕಕ್ಕೆಪದವು, ರಾಧಾಕೃಷ್ಣ, ವೀರೇಶ್, ದೇವಿ ಪ್ರಸಾದ್ ಸಹಕರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net