ಗಂಗಾವತಿ: ತಾಲೂಕಿನ ಹಣವಾಳದಲ್ಲಿ ಅನೈತಿಕ ಸಂಬಂಧ ಹಿನ್ನೆಲೆ ಯುವಕನೊಬ್ಬ ಕೊಲೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾಹಿತ ಮಹಿಳೆ ಸೇರಿ ನಾಲ್ವರನ್ನು ಗ್ರಾಮೀಣ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಹಣವಾಳದ ಸುರೇಶ ಶರಣಪ್ಪ ಜೂಡಿ (27)ಕೊಲೆಯಾದ ಯುವಕ. ಕೊಲೆ ಮಾಡಿರುವ ಬಗ್ಗೆ ಒಪ್ಪಿಕೊಂಡ ಹಣವಾಳದ ಶಿವಕುಮಾರ ಚಡಿಹಾಳ, ಅಂಬರೀಶ ಕುರಿ, ಮಂಜುನಾಥ ಚಡಿಹಾಳ ಮತ್ತು ಮಹೇಶ್ವರಿ ಅಲಿಯಾಸ್ ಲಕ್ಷ್ಮೀ ಬಂಧಿತರು.
ಮೃತ ಯುವಕ ಏ.28ರಂದು ಕಾಣೆಯಾದ ಬಗ್ಗೆ ಯುವಕನ ತಂದೆ ಶರಣಪ್ಪ ಜೂಡಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ಯುವಕನ ಮೊಬೈಲ್ ಕರೆ ಆಧರಿಸಿ ವಿಚಾರಣೆ ನಡೆಸಿದಾಗ ಕೊಲೆಯಲ್ಲಿ ಅಂತ್ಯಗೊಂಡಿರುವುದು ಗೊತ್ತಾಗಿದೆ. ಮೃತ ಯುವಕ ಹಣವಾಳದ ಮಹೇಶ್ವರಿಯೊಂದಿಗೆ ಸಲುಗೆಯಿಂದ ಇದ್ದಿದ್ದು, ಏ.28ರಂದು ರಾತ್ರಿ ಮಹೇಶ್ವರಿ ಮನೆಗೆ ಹೋಗಿದ್ದಾನೆ.
ಗಮನಿಸಿದ ಮಹೇಶ್ವರಿ ಪತಿ ಶಿವಕುಮಾರ ಚಡಿಹಾಳ್ ಮತ್ತು ಇತರರು ಆರೋಪಿಗಳು, ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಶವವನ್ನು ಕುಡಿತಿನ ಠಾಣೆ ವ್ಯಾಪ್ತಿಯ ದೇವಲಾಪುರದ ಬಳಿಯ ತುಂಗಭದ್ರಾ ಬಲದಂಡೆ ಕಾಲುವೆ ಭವರ್ (ಆಳವಾದ ಭಾವಿ)ಯಲ್ಲಿ ಎಸೆದಿದ್ದಾರೆ. ಮೃತ ಯುವಕನ ಬೈಕ್‌ನ್ನು ದರೋಜಿ ಕೆರೆಯಲ್ಲಿ ಹಾಕಿದ್ದಾರೆ.
ತಪ್ಪಿತಸ್ಥರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಕೃತ್ಯಕ್ಕೆ ಬಳಸಿದ ಕಾರು ಸೇರಿ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚುವರಿ ಎಸ್ಪಿ ಆರ್. ಹೇಮಂತಕುಮಾರ ನೇತೃತ್ವದ ತಂಡ ಪ್ರಕರಣ ಭೇದಿಸಿದ್ದು, ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಗ್ರಾಮೀಣ ಪಿಐ ರಂಗಪ್ಪ ದೊಡ್ಮನಿ ನೇತೃತ್ವದ ಪೊಲೀಸ್ ತಂಡ ನೆರವಾಗಿದೆ. ಅಲ್ಪಸಮಯದಲ್ಲಿ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಬಹುಮಾನ ೋಷಿಸಲಾಗಿದೆ.