

ಮಲೇಬೆನ್ನೂರು: ಹರಿಹರ ತಾಲೂಕಿನ ಇಂಗಳಗೊಂದಿ ಸಮೀಪದ ತುಂಗಭದ್ರಾ ನದಿಗೆ ಕಾಲು ಜಾರಿ ಬಿದ್ದು ಯುವಕನೊಬ್ಬ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇಂಗಳಗೊಂದಿಯ ತುಂಗಭದ್ರಾ ನದಿಯಲ್ಲಿ ಗುರುವಾರ ಘಟನೆ ನಡೆದಿದ್ದು, ಶನಿವಾರ ಸಂಜೆ ಧೂಳೆಹೊಳೆ ಬಳಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇಂಗಳಗೊಂದಿ ನಿವಾಸಿ ಎಂ.ಡಿ.ಜಯಪ್ಪ (35) ಮೃತ ಯುವಕ.
ಇವರು ಬೆಳಗಿನ ಜಾವ ಎಮ್ಮೆಗಳನ್ನು ಮೈತೊಳೆಯಲು ಗ್ರಾಮದ ಪಕ್ಕದಲ್ಲಿ ಹರಿಯುವ ನದಿಗೆ ಹೋಗಿದ್ದಾರೆ. ಬೆಳಗ್ಗೆ 7 ಗಂಟೆಯಾದರೂ ಮನೆಗೆ ಬಾರದ ಕಾರಣ, ಇವರ ತಮ್ಮ ಹನುಮಂತ ಸ್ನೇಹಿತನೊಂದಿಗೆ ನದಿ ಬಳಿ ತೆರಳಿದ್ದಾರೆ. ಅಲ್ಲಿ ಎಮ್ಮೆಗಳು ಮಾತ್ರ ಕಂಡುಬಂದಿವೆ. ಧೂಳೆಹೊಳೆ ಬಳಿ ಶವ ಪತ್ತೆಯಾಗಿದೆ.
ಈಜು ಬಾರದ ನನ್ನ ಅಣ್ಣ ಕಾಲು ಜಾರಿ ನದಿಗೆ ಬಿದ್ದು, ಮೃತಪಟ್ಟಿದ್ದಾನೆ ಎಂದು ಮಲೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.