ಜಲಪಾತದ ನೀರಿನಲ್ಲಿ ಮುಳುಗಿ ಯುವಕ ಸಾವು

4.npk-1
Published on

ಮಡಿಕೇರಿ: ಚೆಯ್ಯಂಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಜಲಪಾತಕ್ಕೆ ಭಾನುವಾರ ಇಳಿದಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.


ನಾಪೋಕ್ಲುವಿನ ಇರಿಯಟ್ಟಿಯ ಮಹಮ್ಮದ್ ಆಶ್ರಫ್ ಪುತ್ರ ರಶೀದ್ (25) ಮೃತ. ಕೇರಳದ ಕಣ್ಣೂರಿನಿಂದ ರಶೀದ್, ಮಹಮ್ಮದ್ ಶಾಲಿ ಹಾಗೂ ಇಬ್ಬರು ಯುವತಿಯರು ಭಾನುವಾರ ಬೆಳಗ್ಗೆ ಚೇಲಾವರ ಫಾಲ್ಸ್ ವೀಕ್ಷಣೆಗೆ ಬಂದಿದ್ದರು. ಮಧ್ಯಾಹ್ನ ಬಿಸಿಲಿನ ಝಳ ಇದ್ದ ಕಾರಣ, ರಶೀದ್ ಜಲಪಾತದ ಕೆಳಭಾಗದ ಹೊಂಡದಲ್ಲಿ ಸ್ನಾನ ಮಾಡಲು ಇಳಿದಿದ್ದಾನೆ. ಈ ವೇಳೆ ಜಲಪಾತದ ಒಳಸುಳಿಗೆ ಸಿಲುಕಿ ಮೃತಪಟ್ಟಿದ್ದಾನೆ.


ಸ್ಥಳೀಯ ಪೊಲೀಸರು ಮತ್ತು ಮಡಿಕೇರಿಯ ಅಗ್ನಿಶಾಮಕ ದಳದ ಸಿಬ್ಬಂದಿ ಮಹಮ್ಮದ್, ನಂಜಪ್ಪ ಮತ್ತು ಶಾಹಿದ್ ನೆರವಿನೊಂದಿಗೆ ಮೃತದೇಹವನ್ನು ಹೊರತೆಗೆದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಪ್ರಕರಣದ ಬಗ್ಗೆ ಮೃತನ ಪಾಲಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ನಾಪೋಕ್ಲು ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ರಶೀದ್, ಮಹಮ್ಮದ್ ಶಾಲಿ ಮಟ್ಟನೂರಿನ ಖಾಸಗಿ ಪ್ರವಾಸಿ ಸಂಸ್ಥೆಗಳಲ್ಲಿ, ಇಬ್ಬರು ಯುವತಿಯರು ಕ್ಯಾಲಿಕಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ.
ಎಚ್ಚೆತ್ತುಕೊಳ್ಳದ ಸ್ಥಳೀಯ ಆಡಳಿತಾಧಿಕಾರಿಗಳು:ಚೇಲಾವರ ಜಲಪಾತದಲ್ಲಿ ಪ್ರವಾಸಿಗರಿಗೆ ಯಾವುದೇ ಭದ್ರತೆ ಒದಗಿಸಲಾಗಿಲ್ಲ. ಆಗಿಂದಾಗ್ಗೆ ಇಂತಹ ಪ್ರಕರಣಗಳು ನಡೆಯುತ್ತಿವೆ. ಫಾಲ್ಸ್ ನೋಡಲು ಬರುವವರು ಒಳ ನುಸುಳದಂತೆ ತಂತಿ ಬೇಲಿ ಅಳವಡಿಸಲು ಹಲವಾರು ಬಾರಿ ಮನವಿ ಪತ್ರಗಳನ್ನು ಸ್ಥಳೀಯರು ಬರೆದಿದ್ದಾರೆ.

ಸುರಕ್ಷಿತವಾಗಿ ಫಾಲ್ಸ್ ನೋಡಲು ತೂಗು ಸೇತುವೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಕೂಡ ಇದೆ. ಆದರೆ, ಇದ್ಯಾವುದನ್ನೂ ಪ್ರವಾಸೋದ್ಯಮ ಇಲಾಖೆ ಪರಿಗಣಿಸಿದಂತೆ ಕಾಣುತ್ತಿಲ್ಲ ಎಂಬುದು ಸ್ಥಳೀಯ ಗ್ರಾಮಪಂಚಾಯಿತಿ ಆಡಳಿತ ಮಂಡಳಿ ಆರೋಪವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net