ರೈಲು ಡಿಕ್ಕಿಗಾಗಿ ಯುವಕ ಸ್ಥಳದಲ್ಲೇ ಸಾವು

train accident hemanth death
ಮೃತ ಯುವಕ ಕೆ.ಜಿ.ಹೇಮಂತ್‌ಕುಮಾರ್
Published on

ಶಿವಮೊಗ್ಗ: ನಗರದ ಹೊರವಲಯದ ಕಾಶಿಪುರ ರಸ್ತೆಯ ಪಶು ವೈದ್ಯಕೀಯ ಕಾಲೇಜು ಬಳಿ ಭಾನುವಾರ ರಾತ್ರಿ ರೈಲು ಡಿಕ್ಕಿಗಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

ಸವಾರ್‌ಲೈನ್ ರಸ್ತೆಯ ಕೆ.ಜಿ.ಹೇಮಂತ್‌ಕುಮಾರ್ (24) ಮೃತ ಯುವಕ. ಈತ ತನ್ನ ಮೂವರು ಸ್ನೇಹಿತರೊಂದಿಗೆ ರಾತ್ರಿ ಪಶು ವೈದ್ಯಕೀಯ ಕಾಲೇಜು ಸಮೀಪದ ರೈಲ್ವೆ ಸೇತುವೆ ಬಳಿ ಮದ್ಯ ಸೇವಿಸಿದ್ದರು. ಈ ವೇಳೆ ಶಿವಮೊಗ್ಗದಿಂದ ತಾಳಗುಪ್ಪ ಕಡೆ ತೆರಳುವ ರೈಲು ಡಿಕ್ಕಿ ಹೊಡೆದಿದ್ದು ಹೇಮಂತ್‌ಕುಮಾರ್ ಜತೆಗಿದ್ದವರು ಪಾರಾಗಿದ್ದಾರೆ.
ರೈಲು ವೇಗವಾಗಿದ್ದ ಕಾರಣ ಹೇಮಂತ್‌ಕುಮಾರ್ ಹಳಿಯಿಂದ ಹೊರಬರುವ ಮುನ್ನವೇ ಡಿಕ್ಕಿ ಹೊಡೆದಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶಿವಮೊಗ್ಗ ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮೆಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು ಹೇಮಂತ್‌ಕುಮಾರ್‌ನನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net