

ಹೊಸಪೇಟೆ: ವೈದ್ಯರ ನಿರ್ಲಕ್ಷೃದಿಂದ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮಂಗಳವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆ ಎದುರು ಮೃತನ ಸಂಬಂಧಿಕರು ಪ್ರತಿಭಟನೆ ನಡೆಸಿದರು.
ತಾಲೂಕಿನ ಕಲ್ಲಹಳ್ಳಿ ತಾಂಡಾದ ಯುವಕ ಸುನಿಲ್ ನಾಯ್ಕ (25) ಎಂಬುವವರು ಪ್ಯಾಂಕ್ರ್ಯಾಟಿಸ್‌ನಿಂದ ಬಳಲುತ್ತಿದ್ದು, ಮಂಗಳವಾರ ಬೆಳಗ್ಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನದ ವೇಳೆಗೆ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿತ್ತು. ಆನಂತರ ಸುನಿಲ್ ನಾಯ್ಕ ಪ್ರಜ್ಞೆ ತಪ್ಪಿದ್ದ.
ಈ ಬಗ್ಗೆ ವೈದ್ಯರ ಗಮನ ಸೆಳೆದಾಗ ಬಿಪಿ ಕಡಿಮೆಯಾಗಿದೆ ಪ್ರಯತ್ನಿಸುತ್ತೇನೆ ಎನ್ನುತ್ತಲೇ ಕಾಲಹರಣ ಮಾಡಿ, ರಾತ್ರಿ 8.15ಕ್ಕೆ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವಾಗಿದ್ದು, ಕ್ರಮ ಕೈಗೊಳ್ಳಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದರು.
ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಆಸ್ಪತ್ರೆ ಎದುರುಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಕೆಲವರು ಆಸ್ಪತ್ರೆಗೆ ನುಗ್ಗಲು ಯತ್ನಿಸಿದಾಗ ಪರಿಸ್ಥಿತಿ ಕೊಂಚ ಬಿಗಡಾಯಿಸಿತಾದರೂ, ಸ್ಥಳದಲ್ಲಿದ್ದ ಪೊಲೀಸರು ಉದ್ರಿಕ್ತರನ್ನು ನಿಯಂತ್ರಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯರು, ಸುನಿಲ್ ನಾಯ್ಕ ಮೂರು ತಿಂಗಳಿನಿಂದ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಯುವಕನಿಗೆ ಮೇದೋಜೀರಕ ಗ್ರಂಥಿಯ ಸಮಸ್ಯೆ ಇತ್ತು. ಪಕ್ಕೆಯಲ್ಲಿ ರಕ್ತಹೆಪ್ಪುಗಟ್ಟಿದ್ದಕ್ಕೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ಸಂಜೆ 6 ಗಂಟೆಯ ಹೊತ್ತಿಗೆ ಕಡಿಮೆ ರಕ್ತದೊತ್ತಡ ಕಂಡುಬಂತು. ಆಗಲೂ ಎಲ್ಲ ಪ್ರಯತ್ನವನ್ನೂ ಮಾಡಿದ್ದೆವು. ರಾತ್ರಿ 8 ಗಂಟೆ ಹೊತ್ತಿಗೆ ಮೃತಪಟ್ಟಿದ್ದಾನೆ. ನಿನ್ನೆಯಿಂದ ಆತನ ಜತೆಗೆ ನಾನು ಇದ್ದು, ಚಿಕಿತ್ಸೆ ನೀಡಿದ್ದೇನೆ. ನಮ್ಮಿಂದ ಯಾವುದೇ ನಿರ್ಲಕ್ಷೃವಾಗಿಲ್ಲ. ಯಾವುದೇ ತನಿಖೆಗೂ ನಾವು ಸಿದ್ಧ ಎಂದರು.