ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ

praveen
Published on
ಶಿಗ್ಗಾಂವಿ(ಗ್ರಾ): ತನ್ನ ಪ್ರೀತಿಯನ್ನು ಯುವತಿ ಒಪ್ಪಲಿಲ್ಲ ಎಂದು ಮನನೊಂದ ಯುವಕ ಯುವತಿ ಮಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತಡಸ ಗ್ರಾಮದ ತಾಯವ್ವದೇವಿ ದೇವಸ್ಥಾನ ಬಳಿ ಶುಕ್ರವಾರ ನಡೆದಿದೆ.

ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದ ಪ್ರವೀಣ ಭರಮಪ್ಪ ಬೆಟದೂರ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಬೆಳಗಲಿಯ ಯುವಕ ಪ್ರವೀಣ, ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ತನ್ನ ಗೆಳತಿಯನ್ನು ಬೈಕ್​ನಲ್ಲಿ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದ ತಾಯವ್ವದೇವಿ ದೇವಸ್ಥಾನ ಹತ್ತಿರ ಕರೆದುಕೊಂಡು ಬಂದು ಪ್ರೀತಿಸುವಂತೆ ಕೋರಿಕೊಂಡಿದ್ದಾನೆ. ಆದರೆ, ಆತನ ಪ್ರೀತಿಯನ್ನು ನಿರಾಕರಿಸಿದ ಯುವತಿ, ನಮ್ಮದು ಸ್ನೇಹವಷ್ಟೇ ಪ್ರೀತಿ ಅಲ್ಲ ಎಂದು ಹೇಳಿದ್ದಳು. ಇದರಿಂದ ಬೇಸರಗೊಂಡು ಕೂಗಾಡಿದ್ದ ಪ್ರವೀಣ, ಪೆಟ್ರೋಲ್ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಎಂದು ತಿಳಿದು ಬಂದಿದೆ. ಸ್ಥಳೀಯರು ಸಹಾಯಕ್ಕೆ ಹೋಗುವಷ್ಟರಲ್ಲಿ ಸಂಪೂರ್ಣ ಸುಟ್ಟು ಕೊಂಡಿದ್ದನು. ನಂತರ ತಡಸ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಿಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net