

ಗಜೇಂದ್ರಗಡ: ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಚಂದ್ರು ಶಂಕ್ರಪ್ಪ ರಾಠೋಡ(24) ಕ್ರಿಮಿನಾಶಕ ಸೇವಿಸಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಒಕ್ಕಲುತನ ಮಾಡಿಕೊಂಡು ಜೀವನ ನಡೆಸುತ್ತಿದ್ದ ಯುವಕ ಹತ್ತಿ ಬೆಳೆ ಸಮರ್ಪಕವಾಗಿ ಬಂದಿಲ್ಲ ಎಂದು ಮನನೊಂದಿದ್ದ. ಮನೆಯಲ್ಲಿ ಇದೇ ವಿಷಯ ಆಗಾಗ ಪ್ರಸ್ತಾಪ ಮಾಡುತ್ತಿದ್ದ. ನಿತ್ಯವು ಹೊಲದ ಕೆಲಸವನ್ನು ನಿರ್ವಹಣೆ ಮಾಡುತ್ತಿದ್ದ ಯುವಕ ಭಾನುವಾರ ರಾತ್ರಿ ಊಟ ಮಾಡಿ ಹೊಲಕ್ಕೆ ನೀರು ಹಾಯಿಸಲು ಹೋದಾಗ ಅಲ್ಲಿಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಿಗ್ಗೆ ಹತ್ತಿಪ್ಲಾಟಿನ ಹೂವುಗಳನ್ನು ಕ್ರಾಸ್ ಮಾಡಲು ಬಂದ ಮನೆಯವರು ಬೇವಿನ ಗಿಡದ ಕೆಳಗೆ ಮಲಗಿರುವುದನ್ನು ನೋಡಿ ಎಬ್ಬಿಸಿದ್ದಾರೆ. ಆಗ ಬಾಯಲ್ಲಿ ನೊರೆ ಬರುತ್ತಿರುವುದನ್ನು ಹಾಗೂ ವಾಸನೆ ಗ್ರಹಿಸಿ ಚಿಕಿತ್ಸೆಗಾಗಿ ಗಜೇಂದ್ರಗಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.