

ಹುಬ್ಬಳ್ಳಿ: ತಂದೆಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ ಯುವಕನಿಗೆ ಹಾವು ಕಚ್ಚಿದ ಕೂಡಲೇ ಅದೇ ಹಾವಿನೊಂದಿಗೆ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾದ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಾವು ಕಚ್ಚಿಸಿಕೊಂಡ ಯುವಕ ಫಕೀರಪ್ಪ ಅಣ್ಣಿಗೇರಿ, ಬುಧವಾರ ಸಂಜೆ 5 ಗಂಟೆಗೆ ತನ್ನ ತಂದೆ ಜತೆ ಸೇಂಗಾ ಕೀಳಲು ಹೋಗಿದ್ದ. ಈ ವೇಳೆ ಫಕೀರಪ್ಪ ಅಣ್ಣಿಗೇರಿ ಅವರಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ಕೂಡಲೇ ಹಾವಿನ ತಲೆ ಜಜ್ಜಿ ಕೊಂದಿದ್ದಾರೆ. ನಂತರ ತಂದೆ ಜತೆ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗಿದ್ದಾರೆ. ವೈದ್ಯರಿಗೆ ಹಾವು ತೋರಿಸಿ, ‘ಇದೇ ಹಾವು ಕಚ್ಚಿದೆ ಚಿಕಿತ್ಸೆ ಕೊಡಿ’ ಎಂದು ಫಕೀರಪ್ಪ ಕೇಳಿಕೊಂಡಿದ್ದಾರೆ. ನಗರದ ಕೆಎಂಸಿಆರ್‌ಐನಲ್ಲಿ ಯುವಕನಿಗೆ ಚಿಕಿತ್ಸೆ ಮುಂದುವರಿದೆ.
‘ಫಕೀರಪ್ಪ ಅವರಿಗೆ ಬುಧವಾರ ಹಾವು ಕಡಿದು ನಮ್ಮ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗಿಲ್ಲ’ ಎಂದು ಕೆಎಂಸಿಆರ್‌ಐ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ತಿಳಿಸಿದ್ದಾರೆ.