ಸಾಲಭಾದೆ ತಾಳಲಾರದೆ ಯುವ ರೈತ ಆತ್ಮಹತ್ಯೆ

12BTP03 MANJU
Published on

ಬೆಟ್ಟದಪುರ: ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಾಲಭಾದೆಗೆ ಹೆದರಿ ಯುವ ರೈತನೊಬ್ಬ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗ್ರಾಮದ ಸಿ.ಕೆ ಜಗದೀಶ್ ಅವರ ಮಗ ಸಿ.ಜೆ.ಮಂಜು (26) ಮೃತ ರೈತ. ಮೃತ ಮಂಜು ಮನೆಯ ಎಲ್ಲ ಜವಾಬ್ದಾರಿಯನ್ನು ಹೊತ್ತು ತನ್ನ ಹೆಸರಿನಲ್ಲಿ ಇದ್ದ ಮೂರು ಎಕರೆ, ತಾಯಿ ಕವಿತಾ ಹೆಸರಿನಲ್ಲಿ ಇದ್ದ ಎರಡೂವರೆ ಎಕರೆ ಮತ್ತು ತಂದೆ ಹೆಸರಿನಲ್ಲಿ ಇದ್ದ ಒಂದು ಎಕರೆ ಹನ್ನೊಂದು ಗುಂಟೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ.

ಕೃಷಿ ಚಟುವಟಿಕೆಗಾಗಿ ಕುಶಾಲನಗರದ ಕೆನರಾ ಬ್ಯಾಂಕಿನಲ್ಲಿ ತನ್ನ ಹೆಸರಿನಲ್ಲಿ 7.5 ಲಕ್ಷ ರೂ., ತಾಯಿ ಕವಿತಾ ಹೆಸರಿನಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಪ್ಪರದಹಳ್ಳಿಯಲ್ಲಿ 3.5 ಲಕ್ಷ ರೂ. ಮತ್ತು ಪರಿಚಯಸ್ಥರ ಬಳಿ 4 ಲಕ್ಷ ರೂ. ಕೈ ಸಾಲ ಸೇರಿದಂತೆ ಒಟ್ಟು 15 ಲಕ್ಷ ರೂ. ಸಾಲ ಮಾಡಿ ಜಮೀನಿನಲ್ಲಿ ತಂಬಾಕು ಮತ್ತು ಶುಂಠಿ ಬೇಸಾಯ ಮಾಡಿದ್ದ. ಕಳೆದ ಎರಡು-ಮೂರು ವರ್ಷಗಳಿಂದ ಸರಿಯಾದ ಫಸಲು ಬಾರದೆ ಇರುವುದರಿಂದ ಸಾಲ ಹೇಗೆ ತೀರಿಸಬೇಕು ಎಂದು ಮನನೊಂದು ಜಮೀನಿನಲ್ಲಿ ಇರುವ ಹೊಂಗೆ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ. ತಕ್ಷಣ ಆತನನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ವ್ಯವಸಾಯಕ್ಕಾಗಿ ಮಾಡಿದ ಸಾಲವನ್ನು ಹೇಗೆ ತಿಳಿಸಬೇಕೆಂದು ತೋಚದೆ ನನ್ನ ಮಗ ನೇಣು ಹಾಕಿಕೊಂಡು ಮುತ್ತಪಟ್ಟಿದ್ದಾನೆ ಎಂದು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಮೃತ ಮಂಜುವಿನ ತಂದೆ ಜಗದೀಶ್ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net