ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಮೊಳಗಿದ ಯುವ ಝೇಂಕಾರ

18 gkp.03
ಪೊನ್ನಂಪೇಟೆ ಬಸ್ ನಿಲ್ದಾಣದ ಬಸವೇಶ್ವರ ದೇವಾಲಯದ ಮುಂದೆ ರಾಮಕೃಷ್ಣ ಶಾರದಾಶ್ರಮ ಸ್ವಾಮೀಜಿಗಳಾದ ಪರಹಿತಾನಂದ ಸ್ವಾಮೀಜಿ ಡೋಲು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಡಾ.ಬಿ.ಕೆ.ಕುಮಾರಸ್ವಾಮಿ, ಡಾ.ಬಸವರಾಜ್, ಡಾ.ನಾರಾಯಣ, ಡಾ.ನಾರಾಯಣ ಎಸ್.ಮಾವರ್ಕರ್, ಡಾ.ಮಂಜಪ್ಪ, ಡಾ.ಮಹಮ್ಮದ್ ಹರೀಫ್, ಡಾ.ಕೆಂಚರೆಡ್ಡಿ, ಡಾ.ಗಣೇರ್ಶ ಪ್ರಸಾದ್ ಇತರರಿದ್ದರು.
Published on

ಗೋಣಿಕೊಪ್ಪ: ಕೊಡಗಿನ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಯುವಜನೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ್ದ ಯುವ ಝೇಂಕಾರ ಮೊಳಗಿದವು.

9ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವದ ಮೊದಲ ದಿನದ ಕಾರ್ಯಕ್ರಮದ ಮೆರವಣಿಗೆಯನ್ನು ಪೊನ್ನಂಪೇಟೆ ಬಸ್ ನಿಲ್ದಾಣದ ಬಸವೇಶ್ವರ ದೇವಾಲಯದ ಮುಂದೆ ರಾಮಕೃಷ್ಣ ಶಾರದಾಶ್ರಮದ ಪರಹಿತಾನಂದಜಿ ಡೋಲು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. 5 ವರ್ಷಗಳಿಗೊಮ್ಮೆ ನಡೆಯುವ ಈ ವಿನೂತನ ಕಾರ್ಯಕ್ರಮದಲ್ಲಿ ರಾಜ್ಯದ 6 ಮಹಾವಿದ್ಯಾಲಯಗಳ ಐನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಸಂಸ್ಕೃತಿ ಬಿಂಬಿಸುವ ಉಡುಪುಗಳನ್ನು ಧರಿಸುವ ಮೂಲಕ ಮೆರವಣಿಗೆಗೆ ಮೆರುಗು ನೀಡಿದರು.

ಬಸ್ ನಿಲ್ದಾಣದಲ್ಲಿ ಆರಂಭಗೊಂಡ ಮೆರವಣಿಗೆಯು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯಕ್ಕೆ ಆಗಮಿಸಿತ್ತು. ಹಳ್ಳಿಯ ಸೊಗಡನ್ನು ಹೊರಸೂಸುವ ನಿಟ್ಟಿನಲ್ಲಿ ಕಾಲೇಜಿನ ಡೀನ್ ಡಾ.ಜಿ.ಎಂ.ದೇವಗಿರಿ ಮುಂದಾಳತ್ವದಲ್ಲಿ ಎತ್ತಿನಗಾಡಿಯಲ್ಲಿ ಅತಿಥಿಗಳನ್ನು ಕರೆತರಲಾಯಿತು. ಕೊಡಗಿನ ಸಾಂಪ್ರದಾಯಿಕ ವಾಲಗದೊಂದಿಗೆ ಹಿರಿಯರು ತೋಟಗಾರಿಕೆ ಮಹಾವಿದ್ಯಾಲಯ, ಕೃಷಿ ಕಾಲೇಜು ನವಿಲೆ ಶಿವಮೊಗ್ಗ, ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆ, ಕೃಷಿ ಕಾಲೇಜು ಇರುವಕ್ಕಿ, ಸ್ನಾತಕೊತ್ತರ ಮಹಾವಿದ್ಯಾಲಯ ಶಿವಮೊಗ್ಗ ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿ ಬಂದರು.

ಕಾಲೇಜಿನ ಆವರಣದಲ್ಲಿ ನಿರ್ಮಿಸಿದ ಬೃಹತ್ ವೇದಿಕೆಯಲ್ಲಿ ಮೆರವಣಿಗೆ ಉದ್ಘಾಟಿಸಿ ಮಾತನಾಡಿದ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿ ಪರಹಿತಾನಂದ ಅವರು, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶ ಗುಣಗಳನ್ನು ಪಾಲಿಸಬೇಕು. ಪರಿಶುದ್ಧತೆಯಲ್ಲಿ ವಿದ್ಯಾಭ್ಯಾಸವನ್ನು ಶ್ರದ್ಧೆಯಿಂದ ಅಭ್ಯಸಿಸಬೇಕು. ಇದರಿಂದ ಉತ್ತಮ ಜ್ಞಾನ ಹೊಂದಬಹುದು ಎಂದು ಆಶೀರ್ವಚನ ನೀಡಿದರು.

ಚುಟುಕು ಸಾಹಿತಿ ಎಚ್.ಡುಂಡಿರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ವಿದ್ಯಾರ್ಜನೆ ಮಾಡಿದರೆ ಸಾಲದು ಇದರೊಂದಿಗೆ ಉತ್ತಮ ಹವ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಸಾಂಸ್ಕೃತಿಕವಾಗಿ ಬೆಳಕು ಚೆಲ್ಲಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ನಾಶ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಯುವ ಸಮುದಾಯ ಮುಂದಾಗಬೇಕು ಎಂದು ಕರೆ ನೀಡಿದರು.

ಕೃಷಿ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳು ದೊರೆಯುತ್ತಿವೆ. ಅದನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮದೊಂದಿಗೆ ಈ ದೇಶವನ್ನು ಕಟ್ಟುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ ಎಂದರು.

ಶಿವಮೊಗ್ಗ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್ ಮಾತನಾಡಿ, ಕಲಿಕೆಯೊಂದಿಗೆ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಗಿದೆ. ಪಾಠಗಳ ಜೊತೆಯಲ್ಲಿ ಸಾಹಿತ್ಯ ಚಟುವಟಿಕೆ ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಹೊರಸೂಸಲು ಸಹಕಾರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ಮಾತನಾಡಿ, 5 ವರ್ಷಕ್ಕೊಮ್ಮೆ ಮಹಾವಿದ್ಯಾಲಯಗಳಿಗೆ ಅವಕಾಶಗಳು ಲಭಿಸುತ್ತವೆ. ಪ್ರಸ್ತುತ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯಕ್ಕೆ ಲಭಿಸಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಉತ್ತಮ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಕ್ಕಳಲ್ಲಿರುವ ವಿವಿಧ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಸಹಕಾರಿ. ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ರಾಷಟ್ರೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಹೆಸರು ಮಾಡಬೇಕು ಎಂದರು.

ಕೃಷಿ ಉದ್ದಿಮೆದಾರ ಡಾ.ಬಿ.ಕೆ.ಕುಮಾರಸ್ವಾಮಿ, ಶಿಕ್ಷಣ ತಜ್ಞ ಡಾ.ಪಿ.ಕೆ. ಬಸವರಾಜ್, ಡೀನ್‌ಗಳಾದ ಡಾ.ನಾರಾಯಣ ಎಸ್.ಮಾವರ್ಕರ್, ಡಾ.ಮಂಜಪ್ಪ, ಡಾ.ಮಹಮ್ಮದ್ ಹರೀಫ್‌ಖಾನ್, ಡಾ.ಕೆಂಚರೆಡ್ಡಿ, ಡಾ.ಗಣೇಶ್‌ಪ್ರಸಾದ್, ನಿವೃತ್ತ ಡೀನ್ ಸಿ.ಜಿ.ಕುಶಾಲಪ್ಪ, ಅರಣ್ಯ ಮಹಾವಿದ್ಯಾಲಯದ ಅರಣ್ಯ, ಕೃಷಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರಾಮಕೃಷ್ಣ ಹೆಗಡೆ, ಡಾ.ಎನ್.ಶಿವಶಂಕರ್. ಡಾ.ಸತೀಶ್ ಮತ್ತಿತರರು ಇದ್ದರು.
ಕಾರ್ಯಕ್ರಮದ ಅಂಗವಾಗಿ ಯುವಝೇಂಕಾರ ಸ್ಮರಣ ಸಂಚಿಕೆ ಹಾಗೂ 2024ರ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net