

ಕೆಜಿಎಫ್: ಯೋಗಿ ವೇಮನರು ಸುಮಾರು 600 ವರ್ಷಗಳ ಹಿಂದೆಯೇ ವಿಶ್ವಮಾನವರಾಗಿದ್ದು, ಅವರಿಗೆ ಅಗೌರವದಿಂದ, ಅಪಮಾನವಾಗುವ ರೀತಿ ನಡೆದುಕೊಂಡರೆ ನಿಜವಾಗಿಯೂ ನಾವು ಕಸಕ್ಕಿಂತ ಕಡೆಯಾಗುತ್ತೇವೆ ಎಂದು ಶಾಸಕಿ ರೂಪಕಲಾ ಹೇಳಿದರು.
ತಾಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಯೋಗಿ ವೇಮನ ಜಯಂತಿಯಲ್ಲಿ ಮಾತನಾಡಿ, ಕಸಕ್ಕೂ ಒಂದು ಬೆಲೆ ಇದ್ದು, ವೇಮನರ ಬಗ್ಗೆ ಕೀಳಾಗಿ ಮಾತನಾಡುವವರು ಇನ್ನೂ ಕೆಳಹಂತಕ್ಕೆ ಸೇರುವವರಾಗುತ್ತಾರೆ ಎಂದರು.
ಕನ್ನಡದಲ್ಲಿ ಸರ್ವರಂತೆ, ತೆಲುಗಿನಲ್ಲಿ ವೇಮನರು ಹೆಚ್ಚಿನ ಪ್ರಖ್ಯಾತಿ ಗಳಿಸಿದ್ದಾರೆ. ಹುಟ್ಟಿನಿಂದ ಎಲ್ಲರೂ ಸಮಾನರು ಎಂಬ ಸತ್ಯವನ್ನು ತಿಳಿದವನೇ ಸರ್ವ ಶ್ರೇಷ್ಠನೆಂಬ ಉನ್ನತ ಚಿಂತನೆಯನ್ನು ವೇಮನರು ಹೊಂದಿದ್ದರು. ತ್ರಿಪದಿಗಳ ಮೂಲಕ ಜನಪ್ರಿಯರಾದ ಸರ್ವರಂತೆ ಮಹಾಯೋಗಿ ವೇಮನರು ತೆಲುಗಿನಲ್ಲಿ ಪದ್ಯಗಳನ್ನು ರಚಿಸುವ ಮೂಲಕ ಸಮಾಜದಲ್ಲಿನ ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದರು.
ಕೆಜಿಎಫ್ ತಾಲೂಕು ರೆಡ್ಡಿ ಸಮುದಾಯದ ಅಧ್ಯಕ್ಷ ಪ್ರಸನ್ನರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ವೇಮನ ಸಮುದಾಯ ಭವನ ನಿರ್ಮಾಣಕ್ಕೆ ರೂಪಕಲಾ ಅವರಲ್ಲಿ ಮನವಿ ಮಾಡಿದ್ದು, ಭವನ ನಿರ್ಮಾಣಕ್ಕೆ ಎರಡು ತಿಂಗಳಲ್ಲಿ ಜಾಗ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ತಾಲೂಕುಮಟ್ಟದ ಎಲ್ಲ ಅಧಿಕಾರಿಗಳು, ಸಮುದಾಯದ ಮುಖಂಡರು ಇದ್ದರು.
ಸಮುದಾಯದ ಕೆಲಸ ಮಾಡಲು ಸಿದ್ಧ
ಕಳೆದ ವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ವೇಮನ ಜಯಂತಿ ಆಚರಣೆ ಮಾಡಬೇಕೆಂದು ರೆಡ್ಡಿ ಸಮುದಾಯದ ತಾಲೂಕು ಅಧ್ಯಕ್ಷ ಪ್ರಸನ್ನರೆಡ್ಡಿ ತಿಳಿಸಿದರು. ಈ ವೇಳೆ ಶಾಸಕರು, ನೀವು ಈ ಮೊದಲು ಸರ್ಕಾರಿ ನೌಕರರಾಗಿದ್ದಾಗ ಸಂಸ್ಥೆಯಲ್ಲಿ ಯಾವ ರೀತಿ ಜಯಂತಿ ಆಚರಣೆ ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದ್ದರು. ಇದರಿಂದ ಪ್ರಸನ್ನರೆಡ್ಡಿ ಮುಜುಗರಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಯಂತಿಯಲ್ಲಿ ರೂಪಕಲಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪದ ಬಳಕೆಯಿಂದ ಸಮುದಾಯದ ಅಧ್ಯಕ್ಷರಿಗೆ ನೋವು ಉಂಟಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಸಮುದಾಯದ ಏನೇ ಕೆಲಸವಿದ್ದರು ಮಾಡಿಕೊಡಲು ಸಿದ್ಧ ಎಂದರು.