ಲೇಖಕನಿಗೆ ಭಾವ, ಭಾಷೆ ಹದವಾಗಿರಬೇಕು: ಸಾಹಿತಿ ಡಾ. ನೀಲಗಿರಿ ಎಂ. ತಳವಾರ ಅಭಿಮತ

16
Published on

ಮೈಸೂರು: ಸಾರ್ವಕಾಲಿಕವಾದ ಒಂದು ಸರ್ವಶ್ರೇಷ್ಠ ಕೃತಿ ಮೂಡಬೇಕಾದರೆ ಸಾಹಿತ್ಯ ರಚನಾಕಾರನ ಹೃದಯದಲ್ಲಿ ಭಾವ, ಭಾಷೆ, ಅಭಿವ್ಯಕ್ತಿ ಹದವಿರುವುದು ತುಂಬಾ ಮುಖ್ಯ ಎಂದು ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಹಾಗೂ

ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ದಕ್ಷ ಪದವಿ ಕಾಲೇಜಿನಿಂದ ಹೂಟಗಳ್ಳಿಯಲ್ಲಿನ ದಕ್ಷ ಕಾಲೇಜು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಲೇಖಕ ಮುತ್ತೇಶ್ ಮೆಣಸಿನಕಾಯಿ ಅವರ ‘ಹೃದಯ ಗರ್ಭದಲ್ಲೊಂದು ಅಗ್ನಿಪಥ’ ಮತ್ತು ‘ಬೆಳದಿಂಗಳ ಕಾಣುವ ಕನಸು’ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಹೃದಯದಲ್ಲಿ ‘ಹದ’ವಿದ್ದರೆ, ‘ಪದ’ ತಾನೇ ತಾನಾಗಿ ಹುಟ್ಟುತ್ತದೆ. ಆಗ ರಸಭರಿತವಾದ ಸತ್ವಪೂರ್ಣ ಕೃತಿ ರಚನೆಯಾಗುತ್ತದೆ. ಯಾವತ್ತಿಗೂ ಹದವರಿತ ಕೃತಿಗಳು ಓದುಗರನ್ನು ಸೆಳೆದಿಡುವಲ್ಲಿ ಸಫಲವಾಗುತ್ತವೆ. ಇಂತಹ ಹದವರಿತ ಬರವಣಿಗೆಯ ಕಲೆಯನ್ನು ಯುವ ಲೇಖಕರು ರೂಢಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.

ಯುವ ಲೇಖಕ ಮುತ್ತೇಶ್ ಅವರ ಎರಡು ಕೃತಿಗಳ ಭಿತ್ತಿ ವಿಶಿಷ್ಟವಾಗಿದೆ. ಸಿನಿಮೀಯ ಮಾದರಿಯ ಕಥಾನಕ ಹೊಂದಿವೆ. ಇವುಗಳ ಆರಂಭ, ಮಧ್ಯಂತರ, ಅಂತ್ಯ ಗಮನಿಸಿದಾಗ ಆತ್ಮಕಥೆಯ ಗುಣವೂ ಇದೆ. ಆಧುನಿಕ ಜೀವನ ಕ್ರಮದ ಸಂವೇದನೆಗಳಿವೆ. ಆದರೆ ಈ ಕೃತಿಗಳಲ್ಲಿ ಭಾವದ ಹದವಿದ್ದಾಗಿಯೂ, ಅಭಿವ್ಯಕ್ತಿಯ ಹದದ ಕೊರತೆ ಕಾಡುತ್ತದೆ ಎಂದು ವಿಶ್ಲೇಷಿಸಿದರು.

ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಓದಿನಷ್ಟೇ, ಸಾಹಿತ್ಯ ಪುಸ್ತಕಗಳ ಓದು ತುಂಬಾ ಮುಖ್ಯ. ಇದರಿಂದಾಗಿ, ಜ್ಞಾನದ ಜತೆಗೆ ಸಾಹಿತ್ಯ ಪುಸ್ತಕಗಳಲ್ಲಿನ ಲೋಕಾನುಭವ ದೊರಕುತ್ತದೆ. ಸಾಮಾಜಿಕ ವ್ಯಕ್ತಿತ್ವ ವಿಕಾಸವಾಗುತ್ತದೆ. ಸಾಹಿತ್ಯಾಭಿರುಚಿಯ ಆಸಕ್ತಿಯ ಅಂಕುರವಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ವಿವಿಧ ವೃತ್ತಿ ಕ್ಷೇತ್ರದ ಬರಹಗಾರರಿಂದ ಶ್ರೀಮಂತಗೊಂಡಿದೆ. ಭಾಷಾ ಪ್ರಾಧ್ಯಾಪಕರ ಜತೆಗೆ ವೈದ್ಯರು, ಅಭಿಯಂತರರು, ಚಾಲಕರು, ಪೌರಕಾರ್ಮಿಕರು, ತೃತೀಯ ಲಿಂಗಿಗಳು, ರೈತರು ಕೂಡ ಸಾಹಿತ್ಯ ಕೃಷಿ ಮಾಡಿ ಕನ್ನಡ ಸಾಹಿತ್ಯದ ಅನುಭವದ ಸಂಪತ್ತನ್ನು ವಿಸ್ತರಿಸಿದ್ದಾರೆ. ಅದೇ ರೀತಿ ವಿದ್ಯಾರ್ಥಿಗಳು ಸಹ ಸಾಹಿತ್ಯ ಕೃತಿಗಳ ನಿರಂತರ ಓದು ಮತ್ತು ಬರೆವಣಿಗೆಯ ಕಾರ್ಯವನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಸಲಹೆ ನೀಡಿದರು.

ದಕ್ಷ ಕಾಲೇಜಿನ ಅಧ್ಯಕ್ಷ ಪಿ.ಜಯಚಂದ್ರರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಗುರುರಾಜ್, ಕೆ.ಆರ್. ಪೇಟೆಯ ಪತ್ರಕರ್ತ ಕೆ.ಆರ್. ನೀಲಕಂಠ, ಕೆಎಸ್‌ಆರ್‌ಟಿಸಿ ಘಟಕದ ನಿವೃತ್ತ ವ್ಯವಸ್ಥಾಪಕ ಜಿ.ಬಿ. ಮಂಟೂರು, ಲೇಖಕ ಮುತ್ತೇಶ್ ಮೆಣಸಿನಕಾಯಿ, ಕಾಲೇಜಿನ ಪ್ರಾಂಶುಪಾಲ ಅಭಿಷೇಕ್, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಪದಾಧಿಕಾರಿ ಚಂದ್ರು ಮಂಡ್ಯ, ನಿವೃತ್ತ ಪ್ರಾಂಶುಪಾಲ ಕೆ. ಕಾಳೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net