

ಕಾರವಾರ: ಶಿರೂರಿನಲ್ಲಿ ಗಂಗಾವಳಿ ನದಿಯಲ್ಲಿ ಮುಳುಗಿದ ಲಾರಿಯ ಅವಶೇಷಗಳು ಶನಿವಾರ ಪತ್ತೆಯಾಗಿವೆ.
ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಮುಳುಗಿದ ಲಾರಿಯ ಎರಡು ಟಯರ್‌ಗಳನ್ನು ಹುಡುಕಿದ್ದು, ಗೋವಾದಿಂದ ಆಗಮಿಸಿದ ಬಾರ್ಜ್ ಮೇಲಿನ ಕ್ರೇನ್ ಮೂಲಕ ಅದನ್ನು ತೆಗೆಯಲಾಯಿತು. ಲಾರಿ ತಲೆ ಕೆಳಗಾಗಿ ನದಿಯ ಮಣ್ಣಿನಲ್ಲಿ ಬಿದ್ದಿರುವ ಸಾಧ್ಯತೆ ಇದೆ. ಅದರ ಮೇಲೆ ಕಲ್ಲು ಮಣ್ಣು ಬಿದ್ದು, ಬಿಡಿ ಭಾಗಗಳು ತುಂಡಾಗಿರಬಹುದು ಎಂದು ಅಂದಾಜಿಸಲಾಗಿದೆ.
ಗಂಗಾವಳಿ ನದಿಯಲ್ಲಿ ನೀರು ವೇಗವಾಗಿ ಹರಿಯುತ್ತಿರುವುದು ಹಾಗೂ ಮಳೆಯ ಕಾರಣ ನದಿಯ ನೀರು ಕೆಂಪು ರಾಡಿಯಾಗಿರುವುದು ಇದುವರೆಗಿನ ಕಾರ್ಯಾಚರಣೆಗೆ ತೊಡಕಾಗಿತ್ತು. ಈಗ ನೀರಿನ ಹರಿವಿನ ವೇಗ ಕಡಿಮೆಯಾಗಿದೆ. ಮಾತ್ರವಲ್ಲ ನೀರು ತಿಳಿಯಾಗಿದೆ ಹೀಗಾಗಿ ಕಾರ್ಯಾಚರಣೆಗೆ ಅನುಕೂಲವಾಗಿದೆ.
ಹಿನ್ನೆಲೆ: ಜುಲೈ 16 ರಂದು ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣಿನ ರಾಶಿ ಬಿದ್ದಿತ್ತು. ಅಲ್ಲದೇ ಹೆದ್ದಾರಿ ಪಕ್ಕದ ಗಂಗಾವಳಿ ನದಿಯಲ್ಲೂ ದೊಡ್ಡ ಮಣ್ಣಿನ ರಾಶಿ ತುಂಬಿಕೊಂಡಿತ್ತು. ದುರ್ಘಟನೆಯಲ್ಲಿ 11 ಜನ ನಾಪತ್ತೆಯಾಗಿದ್ದರು. ಅದರಲ್ಲಿ 8 ಜನರ ಶವಗಳು ಇದುವರೆಗೆ ಸಿಕ್ಕಿವೆ. ಭಾರತೀಯ ನೌಕಾಸೇನೆ, ಭೂ ಸೇನೆ, ಎನ್‌ಡಿಆರ್‌ಎ್, ಎಸ್‌ಡಿಆರ್‌ಎ್ ತಂಡಗಳು ನಿರಂತರ ಕಾರ್ಯಾಚರಣೆ ನಡೆಸಿದ ಬಳಿಕವೂ ಕೇರಳದ ಅರ್ಜುನ್, ಸ್ಥಳೀಯ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ನಾಪತ್ತೆಯಾಗಿದ್ದಾರೆ. ಎರಡು ಲಾರಿಗಳು ಕಾಣೆಯಾಗಿದ್ದವು. ಅವುಗಳನ್ನು ಹುಡುಕಾಟ ಮಾಡಬೇಕು ಎಂದು ತೀವ್ರ ಒತ್ತಡ ಕೇಳಿ ಬಂದಿತ್ತು. ಕೇರಳ ಸಂಸದ, ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಖಾಸಗಿ ಐಆರ್‌ಬಿ ಕಂಪನಿಯಿಂದ ಸುಮಾರು 91 ಲಕ್ಷ ರೂ. ಅನುದಾನ ಹೊಂದಿಸಿ, ಗೋವಾದಿಂದ ನದಿಯಲ್ಲಿ ಹೂಳೆತ್ತುವ ಯಂತ್ರ ತರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.