ವಿಶ್ವಮಟ್ಟಕ್ಕೇರಿದ ಲಗೋರಿ ಆಟ

Sub_Lagori
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ವಿಶ್ವಮಟ್ಟಕ್ಕೆ ಗ್ರಾಮೀಣ ಆಟ ಲಗೋರಿಯನ್ನು ಪರಿಚಯಿಸಿದ ಕೀರ್ತಿ ದೊಡ್ಡಣ್ಣ ಬರೆಮೇಲು ಅವರಿಗೆ ಸಲ್ಲುತ್ತದೆ. ಗ್ರಾಮೀಣರು ಸಂತಸಪಡುತ್ತಿದ್ದ ಆಟವನ್ನು ಜಾಗತಿಕ ಮಟ್ಟದಲ್ಲಿ ಮಿನುಗುವಂತೆ ಮಾಡುವುದು ಶ್ರೇಷ್ಠವಾದ ಕಾರ್ಯ. ಲಗೋರಿಗೆ ಸಂಬಂಧಿಸಿದ ಕೃತಿಯನ್ನು ರಚಿಸಿ ಅದರ ನಿಯಮಗಳನ್ನು ಅದರಲ್ಲಿ ಉಲ್ಲೇಖಿಸಿ ಸರ್ವರೂ ಈ ಆಟವನ್ನು ಪ್ರೀತಿಸುವಂತೆ ಮಾಡುವುದು ಶ್ಲಾಘನೀಯ ಎಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಹೇಳಿದರು.

ಪಂಜದ ವಾಣಿ ವನಿತಾ ಸಮಾಜದ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಭಾನುವಾರ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಮಹಿಳೆಯರ ವಿಭಾಗದ ಮುಕ್ತ ಲಗೋರಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಲಗೋರಿ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಮಾತನಾಡಿ, ನಮ್ಮ ಮಣ್ಣಿನ ಕ್ರೀಡೆಯಾದ ಲಗೋರಿಗೆ ವಿಶ್ವ ಮನ್ನಣೆ ದೊರಕಿದೆ.ಲಗೋರಿಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಲಗೋರಿಗಾಗಿ ನಿಯಮ ರಚಿಸಿ ಅದರ ಬಗ್ಗೆ ಪುಸ್ತಕ ಬರೆದು ಪ್ರಕಟಿಸಿದ್ದೆ. ಇದಾದ ಬಳಿಕ ವಿಶ್ವಾದ್ಯಂತ ಈ ಕ್ರೀಡೆಯನ್ನು ಆಡಲು ಆರಂಭಿಸಿದರು. ಲಗೋರಿ ಕ್ರೀಡೆ ಉಳಿಸಲು ಲಗೋರಿ ಫೆಡರೇಷನ್ ಸ್ಥಾಪಿಸಲಾಗಿದೆ ಎಂದರು.

ವಾಣಿ ವನಿತಾ ಸಮಾಜದ ಅಧ್ಯಕ್ಷೆ ಸುಮಾ ಕುದ್ವ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಮಹಿಳಾ ಮಂಡಲದ ಒಕ್ಕೂಟ ಅಧ್ಯಕ್ಷೆ ಮಧುಮತಿ ಬೊಳ್ಳೂರು, ವನಿತಾ ಸಮಾಜದ ನಿಕಟಪೂರ್ವಾಧ್ಯಕ್ಷೆ ಮಾಲಿನಿ ಕುದ್ವ, ಕಾರ್ಯದರ್ಶಿ ಸ್ವರ್ಣ ರೋಹಿತ್ ಉಪಸ್ಥಿತರಿದ್ದರು. ಸಮಾಜದ ಪೂರ್ವಾಧ್ಯಕ್ಷರನ್ನು ಗೌರವಿಸಲಾಯಿತು. ಚಿತ್ರಕಲಾ ಪ್ರಾರ್ಥನೆ ಹಾಡಿದರು. ಲತಾ ಮೂಡೂರು, ತುಳಸಿ ಪ್ರಸಾದ್ ಚೀಮುಳ್ಳು, ಪವಿತ್ರಾ ಕುದ್ವ ಪರಿಚಯಿಸಿದರು. ಸ್ವರ್ಣಾ ರೋಹಿತ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net