ಕೃತಿ ಬದುಕಿ ಉಳಿಯುವುದು ಓದುಗನ ಮೂಲಕ: ಸಾಹಿತಿ ರಾಘವೇಂದ್ರ ಪಾಟೀಲ್

07_HSN_07
Published on

ಹಾಸನ: ಬಂಡಾಯ ಸಾಹಿತ್ಯದ ಬಳಿಕ ಬರೆಹ ಸ್ವಾತಂತ್ರ್ಯ ಸಿಕ್ಕಿತು ಎಂಬುದನ್ನು ನಾನು ನಂಬುವುದಿಲ್ಲ. ಅದನ್ನು ಬರಹದ ಬಗ್ಗೆ ತುಡಿತ ಇರುವ ವ್ಯಕ್ತಿ ತಾನೇ ಕಂಡುಕೊಳ್ಳಬೇಕು. ಯಾರೋ ಸ್ವಾಂತಂತ್ರ್ಯ ಕೊಡುತ್ತಾರೆ ಆ ಮೇಲೆ ಬರೆಯುತ್ತೇನೆ ಎನ್ನುವ ಹೇಳಿಕೆ ನಂಬಲಾಗಲ್ಲ ಎಂದು ಸಾಹಿತಿ ರಾಘವೇಂದ್ರ ಪಾಟೀಲ ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನಡೆದ ಹಾಸನ ಸಾಹಿತ್ಯೋತ್ಸವ-2025ರಲ್ಲಿ ಸಮಾರೋಪ ನುಡಿಗಳನ್ನಾಡಿದ ಅವರು, ಪುರುಷ ಮತ್ತು ಸ್ತ್ರೀ ಬೇರೆ ಬೇರೆ ಅನ್ನೋದನ್ನು ಬಿಡಬೇಕು. ಸ್ತ್ರೀವಾದಕ್ಕೆ ಸಾಕಷ್ಟು ಆಯಾಮಗಳಿದ್ದು, ಅದರ ಬಗ್ಗೆ ಮಾತನಾಡಬೇಕು ಎಂದು ಸಲಹೆ ನೀಡಿದರು.

ವಿಮರ್ಶೆ ಇಂತಹ ಕಾಲಕ್ಕೇ ನಿಂತು ಹೋಗುತ್ತದೆ ಅನ್ನುವುದು ನಿಜ. ಹೊಸ ಲೇಖಕರ ಬಗ್ಗೆ ಆ ವಾದ ಬಂದಿಲ್ಲ. ವೃತ್ತಿ ನಿರತ ವಿಮರ್ಶಕರು ಈಗಿಲ್ಲ. ಕೃತಿಯನ್ನು ಬರೆದು ಓದುತ್ತಿದ್ದರು, ಒಟ್ಟು ಸಾಹಿತ್ಯ ಕೃತಿಯ ನೆಲೆ-ಬೆಲೆ ಕುರಿತ ಲೇಖನಗಳು ಸಾಪ್ತಾಹಿಕ ಪುರವಣಿಗಳಲ್ಲಿ ಪ್ರಕಟವಾಗುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ದೇವನೂರು ಮಹದೇವ ಅವರ ಬಳಿಕ ಲೇಖಕರು ಅವಸ್ಥೆಗೆ ಈಡಾಗುತ್ತಿದ್ದಾರೆ. ಯಾವ ವಿಮರ್ಶೆಯಿಂದಲೂ ಲೇಖಕರ ಬದುಕು ಉಳಿಯುವುದಿಲ್ಲ. ನಿಮ್ಮ ಕೃತಿ ಬದುಕುಳಿಯುವುದು ಓದುಗರ ಮೂಲಕ. ವಿಮರ್ಶೆ, ಪ್ರಶಸ್ತಿ ನಂಬಿ ಬರೆಯಲು ಹೋಗಬೇಡಿ. ಹತ್ತಾರು ಕೃತಿಗಳ ಮಧ್ಯೆ ನನ್ನ ಪುಸ್ತಕ ಹೇಗೆ ನಿಲ್ಲುತ್ತದೆ ಎಂಬ ಪ್ರಜ್ಞೆ ನಮ್ಮಲ್ಲಿ ಇರಲೇಬೇಕು. ಹಾಗಾದಾಗ ಮಾತ್ರ ಲೇಖಕ ಸ್ವಾಯತ್ತತೆ ಕಾಪಾಡಿಕೊಳ್ಳುತ್ತಾನೆ ಎಂದರು.

ಪುರುಷ ಸಮಾಜ ದೌರ್ಜನ್ಯ ನಡೆಸುತ್ತದೆ, ಸ್ತ್ರೀ ಸಮಾಜ ಅದನ್ನು ಅನುಭವಿಸುತ್ತದೆಂಬ ಕಲ್ಪನೆ ಅನೇಕ ವರ್ಷಗಳಿಂದ ಎಲ್ಲರಲ್ಲೂ ಮೂಡಿದೆ. ಮಹಿಳೆಯರು ಶಿಕ್ಷಿತರಾಗುತ್ತಿರುವುದರಿಂದ ಅಂತಹ ವಿಚಾರಗಳು ಮುಂದಕ್ಕೆ ಹೋಗಬೇಕಿದೆ. ಪಾಶ್ಚಾತ್ಯ ಮತ್ತು ನಮ್ಮ ಸಂಸ್ಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಿವೆ. ಕುಟುಂಬ ವ್ಯವಸ್ಥೆ ಉಳಿಸಿಕೊಳ್ಳಬೇಕೋ ಅಥವಾ ಉಳಿಸಿಕೊಳ್ಳಬಾರದೋ ಎಂದು ಯೋಚಿಸಬೇಕಾಗುತ್ತದೆ. ಅದು ಬದುಕಿಗೆ ಎಷ್ಟು ಹಿತವಾದ ಮಾರ್ಗ ಕೊಡುತ್ತದೆ ಎಂಬುದನ್ನು ನೋಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಬಾನು ಮುಷ್ತಾಕ್, ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿಯುವ ತನಕ ಎನ್ನುವ ಮನೋಭಾವದಲ್ಲಿರುವವರು ಇವತ್ತಿನ ದಿನ ಉತ್ಸವ ಮಾಡುತ್ತಿದ್ದಾರೆ. ಸಾಹಿತ್ಯದ ಹೆಸರಿನಲ್ಲಿ ಮೆರವಣಿಗೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಸಾಹಿತ್ಯದ ಮೂಲಕ ಹಬ್ಬವಾದರೆ ಪರಿಸ್ಥಿತಿ ಏನು ಎಂಬ ಪ್ರಶ್ನೆ ಹುಟ್ಟಿದೆ ಎಂದರು.

ಸಮಾಜದ ಬಗ್ಗೆ ಮಿಡಿಯುವ ತುಡಿತ, ಧ್ವನಿ ಇರಬೇಕು. ನಾವು 50 ವರ್ಷಗಳನ್ನು ಹೋರಾಟದಲ್ಲೇ ಪೂರ್ಣಗೊಳಿಸಿದ್ದೇವೆ. ನಮ್ಮ ಬದುಕು, ಸಮಾಜ ಪಲ್ಲಟಗೊಂಡಿವೆ. ಕವಲು ದಾರಿಯಲ್ಲಿರುವಾಗ ನಿರಾಕರಣೆ ಮಾಡದೆ ಸ್ವೀಕರಿಸಬೇಕು. ಅದರ ಜೊತೆ ಜೊತೆಯಲ್ಲೇ ಸಾಮಾಜಿಕ ಜವಾಬ್ದಾರಿಯ ಹೊಣೆಗಾರಿಕೆಯನ್ನು ಸಾಹಿತಿ ಇಟ್ಟುಕೊಳ್ಳಬೇಕಾಗುತ್ತದೆ ಎಂದರು.

ಸಾಹಿತ್ಯದಲ್ಲೇ ಹೆಣ್ಣಿಗೆ ಆದ ಅವಮಾನವನ್ನು ರಾಘವೇಂದ್ರ ಪಾಟೀಲರು ಹೇಳಿಲಿಲ್ಲ. ಅನೇಕ ಸಂದರ್ಭಗಳಲ್ಲಿ ಗದರುವಿಕೆ ನಡೆಯುವುದು ಹೆಣ್ಣನ್ನು ಮೌನಗೊಳಿಸುವುದಕ್ಕಾಗಿ. ಆಕೆ ಎಲ್ಲ ಸತ್ವವನ್ನು ಕಳೆದುಕೊಳ್ಳುವ ಹಾಗೆ ಮಾಡಿದರು. ರಾಜಕೀಯದಲ್ಲಿ ಬಂದ ಮಹಿಳೆಗೆ ವೈಶ್ಯೆ ಎಂದರು. ಅದನ್ನು ನಾವು ಎಷ್ಟು ದಿವಸ ಸಹಿಸುವುದು. ಇವತ್ತಿಗೂ ನನಗೆ ಮುಕ್ತವಾಗಿ ಬರೆಯಲು ಅವಕಾಶವಿಲ್ಲ ಏಕೆ ಎಂದು ಪ್ರಶ್ನಿಸಿದರು.

ಆದರೂ ಬರೆಯಬೇಕು ಹಾಗೂ ಬರೆದುದನ್ನು ದಕ್ಕಿಸಿಕೊಳ್ಳಬೇಕೆಂಬ ಸವಾಲು ನನಗಿದೆ. ಈ ಸ್ಥಾನಕ್ಕೆ ಬರಲು ಏನೇನಾಗಿದೆ ಕಣ್ಣಿರಿನ ರಾತ್ರಿ, ನಿದ್ರೆಯಿಲ್ಲದ ರಾತ್ರಿ, ಪ್ರಾಣಾಪಾಯ, ಎಷ್ಟು ಹೊಳೆ ದಾಟಿದ್ದೇನೆ. ಯಾಕೆ ನಾನು ಬರೆಯಬೇಕು. ಹೇಳುವುದು ಬಹಳ ಸುಲಭ. ಬರೆಯುವುದು ಕಷ್ಟ. ಬರೆದರೆ ಕೈ ಸುಡುತ್ತೆ, ಬರೆಯದೆ ಇದ್ದರೆ ಮನಸ್ಸು ಸುಡುತ್ತೆ. ಮಹಿಳೆಯರಿಗೆ ಬರವಣಿಗೆ ಬಹಳ ಕಷ್ಟವಿದೆ. ಒಬ್ಬ ಮಂತ್ರಿ ಕಣ್ಣೀರು ಹಾಕುತ್ತಾರೆ. ಮಹಿಳೆ ಸುಮ್ಮನೆ ಕೂರಬೇಕು. ಇದು ಪುರುಷ ಅಹಂಕಾರ ಅಲ್ಲವಾ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣ ಉಲ್ಲೇಖಿಸಿ ರಾಘವೇಂದ್ರ ಪಾಟೀಲರು ಅದರ ಬಗ್ಗೆ ಹೇಳಲೇ ಇಲ್ಲ ಎಂದರು.

ಹೀಗೆ ಬದುಕಬೇಕು ಅಂತ ಧರ್ಮ ಗ್ರಂಥ ತರ್ತೀರಿ. ಹೀಗಾದರೆ ಹೆಣ್ಣು ಮಕ್ಕಳು ಹೇಗೆ ಬದುಕಬೇಕು. ಗೌರವಯುತ ಬದುಕನ್ನು ಆಕೆಗೆ ಕೊಟ್ಟಿದ್ದರೆ ಯಾಕೆ ಅವಳು ಹೊಸ್ತಿಲಿನಿಂದ ಹೊರಗೆ ಹೋಗ್ತಾಳೆ ಎಂದ ಅವರು, ದಾಂಪತ್ಯ ಜೀವನದಲ್ಲಿ ಕ್ರೌರ್ಯ ಇದ್ದೇ ಇರುತ್ತದೆ. ಪುರುಷ ಎಷ್ಟು ಕ್ರೌರ್ಯ ಮಾಡುತ್ತಾನೋ ಮಹಿಳೆ ಅಷ್ಟೇ ಸಿಟ್ಟು ಹೊಂದಿರುತ್ತಾಳೆ ಎಂದರು.

ಕಾರ್ಯಕ್ರಮದಲ್ಲಿ ಸಾಹಿತ್ಯೋತ್ಸವ ಸಂಚಾಲಕ ಬಿ.ಆರ್.ಲಕ್ಷ್ಮಣರಾವ್, ಗಿರೀಶ್‌ರಾವ್ ಹತ್ವಾರ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ಜೆ.ಆರ್.ಕೆಂಚೇಗೌಡ, ಜಿಪಂ ಉಪ ಕಾರ್ಯದರ್ಶಿ (ಆಡಳಿತ) ಸಿ.ಚಂದ್ರಶೇಖರ್ ಇದ್ದರು. ರಾಜೇಶ್ವರಿ ಹುಲ್ಲೇನಹಹಳ್ಳಿ ಸ್ವಾಗತಿಸಿದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಜಯರಾಮ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net