

ಕುಮಟಾ:ಪಟ್ಟಣದ ವನ್ನಳ್ಳಿ ತೀರದಿಂದ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ ಮಹಿಳೆ ಹೊನ್ನಾವರದ ಬಾಡಿಗೆ ಮನೆಯಲ್ಲಿ ಪತ್ತೆಯಾಗಿ ಅಚ್ಚರಿ ಮೂಡಿಸಿದ್ದಾಳೆ.
ಪಟ್ಟಣದ ವನ್ನಳ್ಳಿ ಸಮುದ್ರದಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿ ಮೂರು ದಿನಗಳಿಂದ ಹುಡುಕಾಟ ನಡೆಸಿದ್ದ ಮನೆಯವರು, ಪೊಲೀಸರು, ಜನರು ಬೆಪ್ಪಾಗಿದ್ದಾರೆ.
ಹೊನ್ನಾವರ ತಾಲೂಕಿನ ಹೆರೇಬೈಲ್ ಗ್ರಾಮದ ಗೋಣಿಬೈಲ್ ಶಾಲೆ ಸನಿಹದ ನಿವಾಸಿ ಟೇಲರಿಂಗ್ ವೃತ್ತಿ ಮಾಡುತ್ತಿದ್ದ ನಿವೇದಿತಾ ನಾಗರಾಜ ಭಂಡಾರಿ(36)ಯನ್ನು ಪೊಲೀಸರು ಹೊನ್ನಾವರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಜೀವಂತ ಪತ್ತೆಮಾಡಿ, ಆಕೆಯ ಕುಟುಂಬದವರಿಗೆ ಒಪ್ಪಿಸಿದ್ದಾರೆ.
ಹಿನ್ನೆಲೆ:
ನ. 25 ರಂದು ತವರು ಮನೆಯಿಂದ ಸ್ಕೂಟರ್ನಲ್ಲಿ ಕುಮಟಾಕ್ಕೆ ಬಂದ ಆಕೆ ತನ್ನ ಇಬ್ಬರು ಗಂಡು ಮಕ್ಕಳನ್ನು ಕುಮಟಾದ ಪಿಕಪ್ ನಿಲ್ದಾಣದಲ್ಲಿ ಕುಳ್ಳಿರಿಸಿ, ತಾನೊಬ್ಬಳೇ ವನ್ನಳ್ಳಿ ಸಮುದ್ರಕ್ಕೆ ತೆರಳಿದ್ದಳು. ಸ್ಕೂಟರ್ನಲ್ಲಿ ತನ್ನ ಮಾಂಗಲ್ಯದ ಸರ, ಕಾಲುಂಗುರ, ಬ್ಯಾಗ್, ಮೊಬೈಲ್ ಮುಂತಾದವುಗಳನ್ನಿಟ್ಟು ನಾಪತ್ತೆಯಾಗಿದ್ದಳು. ಸಮುದ್ರದಲ್ಲಿ ಆಕೆಯ ದುಪ್ಪಟ್ಟಾ ತೇಲೂತ್ತಿರುವುದು ಪತ್ತೆಯಾಗಿದ್ದು, ಅದನ್ನೇ ಆಧರಿಸಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದ ಜನ ಶವಕ್ಕಾಗಿ ಮೂರು ದಿನ ನಿರಂತರ ಹುಡುಕಾಟ ನಡೆಸಿದ್ದರು. ಪೊಲೀಸರು, ಮುಳುಗು ತಜ್ಞರು ಹುಡುಕಾಟ ನಡೆಸಿದ್ದರು. ನಿವೇದಿತಾ ತಾಯಿ ಸುಮಿತ್ರಾ ಗಜಾನನ ಭಂಡಾರಿ ಅವರ ದೂರನ್ನು ಆಧರಿಸಿ ಕುಮಟಾ ಪೊಲೀಸರು ತನೀಖೆ ಕೈಗೊಂಡಿದ್ದರು.
ಆದರೆ, ಆತ್ಮಹತ್ಯೆಯ ನಾಟಕವಾಡಿದ್ದ ನಿವೇದಿತಾ ಭಂಡಾರಿ ಮನೆಯವರ ದಿಕ್ಕು ತಪ್ಪಿಸಲು ದುಪ್ಪಟ್ಟಾ ತೇಲಿ ಬಿಟ್ಟಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸಮುದ್ರ ತೀರದಿಂದ ಬೇರೆ ಆಟೋ ಹತ್ತಿ ಹೋಗಿದ್ದ ಆಕೆ ಹೊನ್ನಾವರದ ಬಾಡಿಗೆ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಈ ವೇಳೆ ಕೌಟುಂಬಿಕ ವಿಚಾರದ ಕಾರಣಕ್ಕೆ ಆತ್ಮಹತ್ಯೆಯ ನಾಟಕವಾಡಿರುವುದಾಗಿ ನಿವೇದಿತಾ ತಪ್ಪೊಪ್ಪಿಕೊಂಡಿರುವುದಾಗಿ ವರದಿಯಾಗಿದೆ.