ಬಸ್ ಸೀಟ್‌ಗಾಗಿ ಕಿಟಕಿಯಿಂದ ಬ್ಯಾಗ್ ಇಟ್ಟು ಹಣ ಕಳೆದುಕೊಂಡ ಮಹಿಳೆ

NRD -BUS 2
ನರಗುಂದದ ಬಸ್ ನಿಲ್ದಾಣದಲ್ಲಿ ಹಣ ಕಳೆದುಕೊಂಡಿರುವ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ನಿಂತಿರುವುದು.
Published on

ನರಗುಂದ: ಉಚಿತ ಬಸ್ ಪ್ರಯಾಣದ ಹಿನ್ನೆಲೆ ಮಹಿಳೆಯರು ಬಸ್‌ಗಾಗಿ ಮುಗಿಬೀಳುತ್ತಿರುವ ಪ್ರಸಂಗ ಎಲ್ಲೆಡೆ ಕಂಡುಬರುತ್ತಿವೆ. ಆದರೆ, ಪಟ್ಟಣದ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ದೇವರ ದರ್ಶನಕ್ಕೆ ತೆರಳುತ್ತಿದ್ದಾಗ ಹಣ ಕಳೆದುಕೊಂಡು ಕಣ್ಣೀರು ಹಾಕಿದ ಘಟನೆ ಮಂಗಳವಾರ ಜರುಗಿದೆ.

ಪಟ್ಟಣದ ಶ್ರೀ ಸಿದ್ರಾಮೇಶ್ವರ ನಗರದ ಲಲಿತಾ ಚಂದ್ರು ವಡ್ಡರ ಹಣ ಕಳೆದುಕೊಂಡವರು. ಲಲಿತಾ ಮಕ್ಕಳೊಂದಿಗೆ ಸುಕ್ಷೇತ್ರ ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಸವದತ್ತಿಗೆ ತೆರಳುವ ಬಸ್‌ಗಾಗಿ ನೂರಾರು ಮಹಿಳಾ ಪ್ರಯಾಣಿಕರು ಮುಗಿಬಿದ್ದಿದ್ದರು. ಬಸ್‌ನಲ್ಲಿ ತನ್ನ ಮೂವರು ಮಕ್ಕಳಿಗೆ ಸೀಟ್ ಕಾಯ್ದಿರಿಸಿಕೊಳ್ಳುವ ಸಲುವಾಗಿ ಲಲಿತಾ ತನ್ನ ಬ್ಯಾಗ್‌ನಲ್ಲಿದ್ದ ಪರ್ಸ್ ಸಹಿತ ಸೀಟ್ ಮೇಲೆ ಕಿಟಕಿ ಮೂಲಕ ಇಟ್ಟಿದ್ದರು.

ಬಸ್‌ನೊಳಗೆ ಪ್ರವೇಶಿಸಿದ ಲಲಿತಾ ಪರ್ಸ್‌ನಲ್ಲಿ ದೇವರ ಪೂಜೆಗಾಗಿ ಇಟ್ಟಿದ್ದ 1 ಸಾವಿರ ರೂಪಾಯಿ ಕಳ್ಳತನವಾಗಿರುವುದು ತಿಳಿದಿದೆ. ತಕ್ಷಣವೇ ಬಸ್ ನಿಲ್ದಾಣದಲ್ಲಿದ್ದ ಕಂಟ್ರೋಲರ್‌ಗೆ ಮಾಹಿತಿ ನೀಡಿದರೂ ಪ್ರಯೋಜನ ಆಗಲಿಲ್ಲ. ಕಣ್ಣೀರು ಹಾಕುತ್ತ ಪುಟ್ಟ ಮಕ್ಕಳೊಂದಿಗೆ ನಿಂತಿದ್ದ ಮಹಿಳೆಗೆ ಸ್ಥಳದಲ್ಲಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಪ್ರಯಾಣಿಕರು ಧನಸಹಾಯ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net