ಕಾವೇರಿ ಮಾತೆಗೆ ಕೈ ಮುಗಿದು ನದಿಗೆ ಹಾರಿದ ಮಹಿಳೆ

21mdkj3
Published on

ಮಡಿಕೇರಿ: ಮೂರ್ನಾಡಿನ ಬಲಮುರಿಯಲ್ಲಿ ಸೋಮವಾರ ಸಂಜೆ ಮಹಿಳೆಯೊಬ್ಬರು ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೂರ್ನಾಡಿನ ನಿವಾಸಿ ಮುನಿಯಮ್ಮ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.

ನದಿಗೆ ಹಾರುವ ಮುನ್ನ ಸೇತುವೆಯ ಮೇಲೆ ನಿಂತು ಸುಮಾರು 20 ಸೆಕೆಂಡ್‌ಗಳ ಕಾಲ ಕಾವೇರಿ ಮಾತೆಗೆ ಕೈ ಮುಗಿದು ನಮಸ್ಕರಿಸಿರುವ ಮುನಿಯಮ್ಮ, ನಂತರ ಸೇತುವೆಯಿಂದ ಸ್ವಲ್ಪ ಕೆಳಗೆ ಇಳಿದು, ಅಲ್ಲಿಂದ ನದಿಗೆ ಹಾರಿದ್ದಾರೆ. ಅನತಿ ದೂರದಲ್ಲಿ ಕುಳಿತಿದ್ದ ಯುವಕನೊಬ್ಬ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ್ದು, ಅದು ವೈರಲ್ ಆಗಿದೆ.

ಈ ವೇಳೆ ಬಲಮುರಿ ದೇವಾಲಯದ ಸಮೀಪದಲ್ಲೇ ಇದ್ದ ಸ್ಥಳೀಯರಾದ ಸೂರಜ್ ಮತ್ತು ಕಿರಣ್ ಎಂಬುವರು ನದಿ ನೀರಿನಲ್ಲಿ ತೇಲಿ ಹೋಗುತ್ತಿದ್ದ ಮಹಿಳೆಯನ್ನು ನೋಡಿದ್ದಾರೆ. ಮಹಿಳೆ ತೇಲಿ ಹೋದಂತೆ ನದಿ ದಂಡೆಯಲ್ಲೇ ಓಡಿದ್ದಾರೆ. 1 ಕಿ.ಮೀ.ವರೆಗೂ ಓಡುತ್ತಲೇ ಬಳಿಕ ಹಗ್ಗ ಪಡೆದು ಅದರ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದಾರೆ. ನಂತರ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಪತಿ ಹಾಗೂ ಪುತ್ರನೊಂದಿಗೆ ವಾಸವಿದ್ದ ಮುನಿಯಮ್ಮ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆತ್ಮಹತ್ಯೆಗೆ ಕಾರಣವೇನೆಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಆದರೆ, ತನ್ನ ತಾಯಿ ಮದ್ಯ ಸೇವಿಸಿದ್ದರಿಂದಾಗಿ ನದಿಗೆ ಹಾರಿದ್ದಾರೆಂದು ಆಕೆಯ ಪುತ್ರ ಹೇಳುತ್ತಿದ್ದಾನೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net